A r v i n d r a j   D e s a i

Monday, January 12, 2015

ಸಂಕ್ರಾಂತಿ ಬಂತು : ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ

ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಟೇಬಲ್ ಮೇಲೆ ಹರವಿಕೊಂಡು, ಪೆನ್ನು ಹಿಡಿದು ಬ್ಲಾಗ್ ಬರೆಯಲು ಶುರು ಮಾಡಿದ್ದೇನೆ. ನಾನು ಚಿಕ್ಕವನಿದ್ದಾಗಿನ ನೆನಪು. ಸಂಕ್ರಾಂತಿ ಬಂತೆಂದರೆ, ಎಳ್ಳು ಸಕ್ಕರೆ ಅಥವಾ ಬೆಲ್ಲದ ಚೂರುಗಳನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿಕೊಂಡು, ನನ್ನ ಅಪ್ಪಾಜಿ ಹೇಳಿಕೊಟ್ಟ ವಾಕ್ಯ "ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ" ಎಂದು ಸರಿಸುಮಾರು ಎಲ್ಲರಿಗೂ ಶುಭಾಶಯ ಕೋರುತ್ತಾ ಊರೆಲ್ಲ ತಿರುಗಿ ಬಿಡುತ್ತಿದ್ದೆ. ಚಿಕ್ಕವರಾಗಿದ್ದಾಗ ಮುಗ್ಧತೆಯಿಂದ ಎಲ್ಲ ಮನೆಯನ್ನು ಭೇಟಿಯಾಗಿ ಎಳ್ಳು ಕೊಡುವುದು ಒಂದು ಸಂಭ್ರಮ.
       ಹಬ್ಬಗಳು ಬಂತೆಂದರೆ ನನಗಂತೂ ಫುಲ್ ಖುಷಿ. ಹಬ್ಬದ ದಿನದಂದು ಮದುವೆ ಮನೆಯ ವಾತಾವರಣ. ನನ್ನ ಅವ್ವನಿಗಂತೂ ಭರಪೂರ ಕೆಲಸ. ಪೂಜೆ ಆಗುವವರೆಗೂ ತಿನ್ನಲು ಏನೂ ಕೊಡುವುದಿಲ್ಲ ಎಂದು ನನ್ನವ್ವ ಹೇಳಿದಾಗ, ಹೊಟ್ಟೆ ಚುರುಗುಟ್ಟುತ್ತಾ ಹುಸಿ ಕೋಪದಿಂದ ಕಾಯುತ್ತಿದ್ದುದೇ ಸಂಭ್ರಮ. ಚಳಿಗಾಲದಲ್ಲಿ ಮೈಯಲ್ಲಾ ಬಿರುಕು ಬಿಟ್ಟು, ನಂತರ ಸಂಕ್ರಮಣ ಬಂದಾಗ, ಎಳ್ಳು ಎಣ್ಣೆಯ ಅಂಶವನ್ನು ಮೈಯಲ್ಲಿ ಬೆರೆಸುತ್ತದೆ ಎಂದು ವೈಜ್ಞಾನಿಕ ಟಿಪ್ಪಣೆ ಕೊಟ್ಟು, ಅಪ್ಪ ಸ್ವತಃ ತಾನೇ ನನ್ನನ್ನು ಸ್ನಾನ ಮಾಡಿಸುತ್ತಿದ್ದರು, ಅದೇ ಸಂಭ್ರಮ.
          ನನ್ನವ್ವ ಎಳ್ಳನ್ನು ಹಸನು ಮಾಡಿ, ಬಿಸಿಲಿಗೆ ಕಾಯಿಸಿ, ಅದರಲ್ಲಿ ಬೆಲ್ಲ ಬೆರೆಸಿ ಎಳ್ಳು ಹೋಳಿಗೆ ಮಾಡಿ, ತಿನ್ನಲು ಕೊಟ್ಟಾಗ ಅದಕ್ಕಿಂತ ಸಂಭ್ರಮ ಇನ್ನೊಂದಿಲ್ಲ. ನನ್ನ ಅಣ್ಣ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಸಂಕ್ರಮಣದ ಮೆರವಣಿಗೆಗೆ ನಾನೇ ರಾಜ. ಅಣ್ಣನಿಲ್ಲದೇ ಕಳೆದ ಎಲ್ಲಾ ಸಂಕ್ರಾಂತಿಗಳಲ್ಲೂ ಆತನ ಕೊರತೆ ಕಾಡುತ್ತಿರುತ್ತಿತ್ತು. ಆದರೆ ನನ್ನ ಅಪ್ಪಾಜಿ, ಅಪ್ಪನಾಗಿ ಅಗತ್ಯ ಬಿದ್ದಾಗ ಅಣ್ಣನಾಗಿ, ಸ್ನೇಹಿತನಾಗಿ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು.


     ನಾನು ಚಿಕ್ಕವನಾಗಿದ್ದಾಗಿನಿಂದ ಹಿಡಿದು, ಇಲ್ಲಿಯವರೆಗೆ ಹಲವಾರು ಬದಲಾವಣೆಗಳನ್ನು ನೋಡುತ್ತಾ ಬಂದಿದ್ದೇನೆ. ನನ್ನ ಅವ್ವ ಮನೆಯಂಗಳದಲ್ಲಿ ಒಂದು ದೊಡ್ಡ ಹಂಡೆ ಹಿಡಿಯುವಷ್ಟು ಜಾಗದಲ್ಲಿ ರಂಗೋಲಿ ಹಾಕುತ್ತಾಳೆ. ಬೆಂಗಳೂರಿನ ಹೆಣ್ಣುಮಕ್ಕಳು ಅಪಾರ್ಟಮೆಂಟ್ ನಲ್ಲಿ ರಂಗೋಲಿ ಹಾಕಲು ಜಾಗ ಹುಡುಕುತ್ತಿರುತ್ತಾರೆ. ನನ್ನವ್ವ ಎಳ್ಳು ಬೆಲ್ಲ ಸೇರಿಸಿ ಉಂಡೆ ಮಾಡಿ ಕೊಡುತ್ತಿದ್ದರೆ, ನನ್ನ ಅಕ್ಕ ಸುಜಾತಾ ಮನೆಯಿಂದಲೇ ಎಳ್ಳುಂಡೆ ಮಾಡಿಸಿ ಮಕ್ಕಳಿಗೆ ಕೊಡುತ್ತಾಳೆ, ಇದೂ ಒಂಥರಾ ಔಟ್ ಸೋರ್ಸಿಂಗ್. ಆಗ ಊರ ತುಂಬೆಲ್ಲಾ ಎಳ್ಳು ಹಂಚುತ್ತಿದ್ದೆವು, ಈಗ ಪಕ್ಕದ ಮನೆಯವರಿಗೂ ಕೊಡುವ ಪದ್ಧತಿ ಇಲ್ಲ. ಆಗ 'ಚರಿಗೆ ಚಲ್ಲು' ವಂಥಾ ಕಾರ್ಯಕ್ರಮಗಳನ್ನೂ ಆಚರಿಸಿದ್ದಿದೆ., ಈಗ ಯಾರ ಮನೆ, ಹೊಲಗಳಲ್ಲೂ ಇದು ಕಾಣ ಸಿಗುವುದಿಲ್ಲ. ಎಳ್ಳು ಬೆಲ್ಲವನ್ನು ಸಂಭಂಧಿಕರಿಗೆ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಕೊಟ್ಟು ಬರುವ ಪದ್ಧತಿಯುತ್ತು, ಈಗೆಲ್ಲ ಎಳ್ಳು ಬೆಲ್ಲ ಚಿತ್ರ ಬಿಡಿಸಿ ಮೊಬೈಲಿನಲ್ಲಿ ಕಳುಹಿಸುವ ಸಮಯ ಬಂದೊದಗಿದೆ. ಹಬ್ಬದ ದಿನದಂದು ಮೆಸೇಜಿಗೆ ಒಂದು ರೂಪಾಯಿ ಮಾಡಿದಾಗಿನಿಂದ ಮೆಸೇಜೂ ಕಡಿಮೆಯಾಗಿಬಿಟ್ಟಿದೆ. ಈಗೇನಿದ್ದರೂ ಫೆಸ್ ಬುಕ್ , ವಾಟ್ಸ್ ಆಪ್.
     ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಆಚರಣೆಗಳೂ ಬದಲಾಗಬೇಕು. ಹಾಗಂತ ಹೋಳಿಗೆ ಬದಲಾಗಿ ಫಿಜ್ಜಾ ಆಗಲಿ, ಪಾಯಸದ ಬದಲಾಗಿ ಕೂಲ್ ಡ್ರಿಂಕ್ಸ್ ಬರಬಾರದು. ಹಬ್ಬದ ಆಚರಣೆಯಲ್ಲಿ ಬದಲಾವಣೆ ಮಾಡಿದರೂ ಸಂಭ್ರಮಕ್ಕೆ ಚ್ಯುತಿ ಬರಬಾರದು. ಅಜ್ಜಿಯರು ಮೊಮ್ಮಕ್ಕಳಿಗೊಸ್ಕರ ವಾದರೂ ಆಚರಣೆಗಳನ್ನು ಆಚರಿಸಿ, ಅದರ ಮಹತ್ವ ಕಾಪಾಡಬೇಕು. ಬಹುಷಃ ಪೀಳಿಗೆಯಿಂದ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದೇ . ಹಿರಿಯರು ಈ ಹಬ್ಬಗಳನ್ನು ಯಾವುದೇ ಕಾರಣವಿಲ್ಲದೆ ಆಚರಣೆ ಮಾಡುವಂಥ ದಡ್ಡರಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಟ್ಟದಂತೂ ಇಲ್ಲ,.
        ಹಬ್ಬಗಳು ಬರೀ ರುಚಿಯಾದ ತಿಂಡಿ ತಿನ್ನುವ ನಾಲಿಗೆಗೆ ಸಂಭಂದಿಸಿದ ವಿಷಯ ಅಲ್ಲ, ಇದು ಮನಸ್ಸಿಗೆ ಸಂಭಂದಿಸಿದ ವಿಷಯವೂ ಹೌದು. ಮನಸ್ಸಿನ ಬದಲಾವಣೆಗಳಿಗೆ, ಪ್ರತಿಜ್ಞೆಗಳಿಗೆ ಒಳ್ಳೆ ದಿನ. ಸಂಕ್ರಾಂತಿಯಂತೂ ಹೇಳಿ ಮಾಡಿಸಿದ ದಿನ. ಈ ಸಂಕ್ರಾಂತಿಗೆ ಒಂದು ಪ್ರತಿಜ್ಞೆ ಮಾಡೋಣ. ಬೆಳಿಗ್ಗೆ ಎದ್ದು ಉಸಿರು ಒಳಗೆ ಎಳೆದುಕೊಳ್ಳುತ್ತಾ ನಾನು ಆರೋಗ್ಯದಿಂದ ಇದ್ದೇನೆ ಎಂದುಕೊಳ್ಳೋಣ. ಉಸಿರು ಹೊರಗೆ ಬಿಡುತ್ತಾ ಅನಾರೋಗ್ಯವೆಲ್ಲಾ ಹೊರಹಾಕುತ್ತಿದ್ದೇವೆ ಎಂದು ಕೊಳ್ಳೋಣ. ಎಳ್ಳು ಬೆಲ್ಲ ತಿಂದು ಇನ್ನೆಲ್ಲ ನಮಗೆ ಒಳ್ಳೆ ದಿನಗಳೇ, ಎಂದು ಕೊಳ್ಳೋಣ. ವ್ಯತಿಗತ ಮನಸ್ತಾಪಗಳಿಗೆ ಪೂರ್ಣ ವಿರಾಮ ಹೊಕೋಣ. ಭೂಲೋಕದಾಚೆಯ ಸ್ವರ್ಗದ ಬಾಗಿಲು ತೆರೆಯಲಿ ಬಿಡಲಿ, ನಮ್ಮೊಳಗೊಂದು ಅರಿವಿನ ಸ್ವರ್ಗದ ಬಾಗಿಲು ಇರುತ್ತದಲ್ಲ, ಅದರ ಬಾಗಿಲು ನಾವೇ ಖುದ್ದಾಗಿ ತೆರೆಯೋಣ. ಮಕರ ಜ್ಯೋತಿಯ ಹಂಗು ತೊರೆದು, ಮನದೊಳಗಿನ ಮನೆಯ ಬಾಗಿಲಲ್ಲಿ ಮಮತೆಯ ದೀಪ ಹಚ್ಚಿಡೋಣ. ಅದು ಬೆಳಗುವ ಪ್ರೀತಿಯ ಬೆಳಕಲ್ಲಿ ಕಾಣುವ ಜಗದಲ್ಲಿ ಸಣ್ಣತನಗಳಿಗೆ ಜಾಗವಿರದಿರಲಿ.
        ಮಕ್ಕಳೆಲ್ಲಾ ಊರಿಗೆ ಹೋದಾಗ, ಅಪ್ಪ ಅವ್ವಂದಿರು ಮಾಡಿ ಬಡಿಸುವ ಪ್ರೀತಿಯ ಊಟದಂತೆ, ಅಣ್ಣಂದಿರು ಪ್ರೀತಿಯಿಂದ ಮೊಟಕುವಂತೆ, ಮನಸ್ಸಿನಿಂದ ಮನಸ್ಸು ಬೆಸೆಯುವ, ಎದೆಯಿಂದ ಎದೆಗೆ ಹರಿಯುವ ಚೈತನ್ಯದ ಮಹಾಪೂರವಾಗಲಿ ಈ ಹಬ್ಬ ಸಂಕ್ರಾಂತಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಇಷ್ಟವಾದರೆ ತಿಳಿಸಿ, ಇಷ್ಟವಾಗದಿದ್ದರೂ ತಿಳಿಸಿ. ಅರವಿಂದರಾಜ್ ಬಿ ದೇಸಾಯಿ