A r v i n d r a j   D e s a i

Monday, October 10, 2016

ಅಪ್ಪ ಅಂದರೆ ಆಕಾಶ ಅಲ್ಲ ಭೂಮಿ

ಎ ಆರ್ ಮಣಿಕಾಂತ್ ರವರ 'ಅಪ್ಪ ಅಂದರೆ ಆಕಾಶ' ಕಾದಂಬರಿಯ ವಿಮರ್ಶೆಯನ್ನು ದಿನಪತ್ರಿಕೆಯಲ್ಲಿ ಓದಿ ಬಹಳ ಖುಷಿಯಾಯಿತು. ವರ್ಷದ ಹಿಂದೆ ಅದರ ತುಣುಕುಗಳನ್ನು ಯಾವುದೋ ವಾಟ್ಸಾಪ್ ಮೆಸೇಜಿನಲ್ಲಿ ಓದಿದ್ದ ನೆನಪು ಕೂಡ ಇದೆ. ಕಾದಂಬರಿಯನ್ನು ಓದಲಾಗಿಲ್ಲ, ಆದರೆ ಸಮಯ ಬಿಡುವು ಮಾಡಿಕೊಂಡು ಖಂಡಿತ ಓದುತ್ತೇನೆ. 
         ಅಪ್ಪನ ಬಗ್ಗೆ ಕಾದಂಬರಿ ಬರೆವಾಗ, ನನಗೂ ನನ್ನಪ್ಪನ ಬಗ್ಗೆ ಒಂದು ಬ್ಲಾಗ್ ಬರೆಯುವ ಆಸೆಯಾಯಿತು. ಬ್ಲಾಗ್ ಬರೆಯಲು ಈ ಪುಸ್ತಕದ ಶೀರ್ಷಿಕೆ ಸ್ಪೂರ್ತಿ. ಹಳೆಯ ಮಾತೊಂದಿದೆ, ಮನೆಯವರೆಲ್ಲಾ ಸ್ನೇಹಿತರಂತಿರಬೇಕು, ಸ್ನೇಹಿತರೆಲ್ಲಾ ಮನೆಯವರಾಗಬೇಕು. ಅದರಂತೆ ಮನೆಯವರೆಲ್ಲರಿಗೂ ಹಲವು ಭಾವನಾತ್ಮಕ ಸನ್ನಿವೇಶಗಳ ಸಹಿತ ನನ್ನ ಆಪ್ತ ಸ್ನೇಹಿತ ನನ್ನ ಅಪ್ಪನನ್ನು ನಿಮಗೆ ಪರಿಚಯ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಬನ್ನಿ.
            ಶಾಲೆಗೆ ಹೋಗುವಾಗ ಸ್ನಾನ ಮಾಡಿಸಿ ಬಟ್ಟೆ ಹಾಕಿ ತಲೆ ಬಾಚಿ, ಒಂದು ಸಿಹಿಮುತ್ತು ಕೊಟ್ಟು ಅಪ್ಪನೇ ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದರು. ಚಿಕ್ಕವನಿದ್ದಾಗ ನನ್ನಂಥ ತುಂಟ, ತಂಟೆಕೋರ ಅವರು ಸಹಿಸಿಕೊಂಡಿದ್ದೇ ಹೆಚ್ಚು. ಎಲ್ಲೋ ಏನೋ ಕಿತಾಪತಿ ಮಾಡಿ, ಯಾರಿಗೋ ಹೊಡೆದು, ಹೊಡಿಸಿಕೊಂಡು ಮನೆಗೆ ಬರಬೇಕೆನ್ನುವಷ್ಟರಲ್ಲಿ ಯಾರೋ ನನ್ನ ಬಗ್ಗೆ ನನ್ನಪ್ಪನ ಬಳಿ ಪಿರಾದೆ ಹೇಳಿದಾಗ, ನನ್ನನ್ನು ಸುಧಾರಿಸುವುದಾದರೂ ಹೇಗೆ ಎಂದು ನನ್ನವ್ವ ನನ್ನಪ್ಪ ತಲೆ ಮೇಲೆ ಕೈಹೊತ್ತು ಕುಳಿತ ಕ್ಷಣಗಳಿಗೆ ಲೆಕ್ಕವಿಲ್ಲ. ನನ್ನಪ್ಪ ಬೈದು, ಹೊಡೆದು ಕೊನೆಗೆ ಪ್ರೀತಿಯಿಂದ ತಲೆ ಮೇಲೆ ಕೈಯಾಡಿಸಿ ಹಾಗೆ ಮಾಡಬಾರದೆಂದು ಹೇಳಿದ ಮರುದಿನವೇ ಮತ್ತೆ ನಾಯಿ ಬಾಲ ಡೊಂಕೇ. ನಾನು ತಂಟೆ ಕಡಿಮೆ ಮಾಡಿದ್ದು ಬೇರೆಯದೇ ಕಥೆ. 
        ನನ್ನ ಅಪ್ಪಾಜಿಯ ಸಂಬಳ ಮೊದಮೊದಲು ಸಾವಿರ ರೂಪಾಯಿ ಮಾತ್ರ ಇರುತ್ತಿತ್ತು. ನನ್ನಣ್ಣನಿಗೆ ಅಥವಾ ನನಗೆ ಯಾವುದೇ ಕೊರತೆ ತಿಳಿಯಬಾರದೆಂದು ಎಚ್ಚರ ವಹಿಸುತ್ತಿದ್ದರು. ಆದರೂ ಅದು ಹೇಗೋ ನಂಗೆ ಅರ್ಥವಾಗಿಬಿಡುತ್ತಿತ್ತು. ಒಂದು ಸಲ ನನ್ನ ಪ್ಯಾರಾಗಾನ್ ಚಪ್ಪಲಿ ಹರಿದುಹೋಗಿತ್ತು, ಅಪ್ಪನ ಚಪ್ಪಲಿಯೂ ಕಿತ್ತುಹೋಗಿತ್ತು. ರಾತ್ರಿ ಅಪ್ಪ ಮನೆಗೆ ಬಂದಾಗ ಬಲಗೈಯಲ್ಲಿ ನನಗೋಸ್ಕರ ಹೊಸ ಚಪ್ಪಲಿ ಇತ್ತು, ಅಪ್ಪನ ಚಪ್ಪಲಿಗೆ ಮಾತ್ರ ಹೊಲಿಗೆ ಬಿದ್ದಿತ್ತು. ಓದುವ ವಿಷಯಕ್ಕೆ ಬಂದಾಗ ಅವರಂಥ ಕರ್ಣ ಇನ್ನೊಬ್ಬರಿಲ್ಲ. ನಾನು ಇಂಜಿನೀರಿಂಗ್ ಓದುವಾಗ ಖರ್ಚು ನೋಡಿ ಮಾಡಬೇಕು ಅಂತ ಹಲವು ಬಾರಿ ಆರ್ಥಿಕ ಶಿಸ್ತಿನ ಉಪನ್ಯಾಸ ಕೊಟ್ಟಿದ್ದಾರೆ, ಆದರೆ ಒಂದು ಉತ್ತಮ ಪುಸ್ತಕ ಖರೀದಿ ಮಾಡಲು ಯಾವುದೇ ಚಿಂತೆ ಮಾಡಬೇಡವೆಂದು ಹೇಳಿದ್ದು ಅಪ್ಪನೇ. ಒಂದು ಉತ್ತಮ ಪುಸ್ತಕ ಒಬ್ಬ ಉತ್ತಮ ಸ್ನೇಹಿತನಿದ್ದಂತೆ ಎಂದು ಹೇಳಿ ಓದುವ ಗೀಳು ಹಚ್ಚಿಸಿದ್ದು ಅಪ್ಪ. ಗಾಂಧಿ ಜೊತೆಗೆ ಕಾಫಿ ಕುಡಿಯುವುದು, ಸಾಯಂಕಾಲ ಸ್ಟೀವ್ ಜಾಬ್ಸ್, ಮೈಕಲ್ ಸ್ಯಾಂಡೆಲ್, ಅಬ್ದುಲ್ ಕಲಾಂ, ಕುವೆಂಪು ಅವರಂಥ ಚಿಂತನ ಶೀಲ ವ್ಯಕ್ತಿಗಳ ಜೊತೆಗಿರುವುದು ಓದಿನಿಂದ ಮಾತ್ರ ಸಾಧ್ಯ. ನಿಮ್ಮ ವ್ಯಕ್ತಿತ್ವವನ್ನು ಪ್ರಭುದ್ಧವಾಗಿಸುವಲ್ಲಿ ಇವು ಸಹಾಯಕಾರಿಯಾಗುತ್ತವೆ. ನನ್ನ ಅಪ್ಪಾಜಿಯ ಸಲಹೆಯನ್ನು ನಿಮಗೂ ಕೊಡುತ್ತೇನೆ. ಓದಿ, ತುಂಬಾ ಓದಿ. ಇಂದಿನ ಓದುಗರೇ ಮುಂದಿನ ನಾಯಕರು. ಸಿಂಧೂ ನಾಗರಿಕತೆಯಿಂದ ಹಿಡಿದು ಇಂದಿನ ನ್ಯಾನೋ ಟೆಕ್ನಾಲಜಿ ವರೆಗೂ ವಿವಿಧ ರೀತಿಯ ಪುಸ್ತಕಗಳು ನಿಮ್ಮ ಕೈಬೆರಳ ತುದಿಯಲ್ಲಿವೆ. ಓದುವ ಪ್ರೀತಿ ಬೆಳೆಸಿಕೊಳ್ಳಬೇಕಷ್ಟೇ!!. 
            ನಾನು ಚಿಕ್ಕವನಿದ್ದಾಗ ಮನೆಗೆ ಫೋನ್ ಬೈಕು ತೆಗೆದುಕೊಳ್ಳೋಣ ಎಂದು ಹಠ ಹಿಡಿದಾಗ, ನನ್ನಪ್ಪಾಜಿ ಬೇಡವೆಂದು ಗದರುತ್ತಿದ್ದರು. ದುಡ್ಡಿಗೆ ಎಷ್ಟು ಲೆಕ್ಕ ಹಾಕುತ್ತಾರೆ ಎಂದೆನಿಸುತ್ತಿತ್ತು. ಆದರೆ ಅಪ್ಪ ಮನೆ ಕಟ್ಟಬೇಕು ಮತ್ತು ಇತರ ಭವಿಷ್ಯದ ಮಾಸ್ಟರ್ ಪ್ಲಾನ್ ಗಳನ್ನು ನಮ್ಮೆಲ್ಲರ ಮುಂದೆ ಮಂಡಕ್ಕಿ ತಿನ್ನುತ್ತಾ ಒಂದು ಸುಂದರ ಸಾಯಂಕಾಲ ಬಿಚ್ಚಿಟ್ಟಾಗ, ಅಪ್ಪ ಒಬ್ಬ ಆರ್ಥಿಕ ತಜ್ಞ ಅನ್ನಿಸಿದ್ದ. ನನ್ನಪ್ಪನ ಸಂಬಳ ಮತ್ತು ಹಣಕಾಸಿನ ನಿರ್ವಹಣೆ ಒಂದು ಥರ ಮಳೆಗಾಲದಲ್ಲಿ ಬಿದ್ದ ಮಳೆ ನೀರನ್ನು ಮಲೆನಾಡಿನ ಬೆಟ್ಟ ತನ್ನ ಮಡಿಲಲ್ಲಿ ಇಂಗಿಸಿಕೊಂಡು ವರ್ಷವಿಡೀ ಜಲಪಾತ ಸುರಿಸಿದಂತೆ. 
            ನಾವೇನೋ ಬೆಂಗಳೂರಿಗೆ ಬಂದು ನಾಲ್ಕು ಕಂಪ್ಯೂಟರಿನ ಅಕ್ಷರ ಕಲಿತಾಕ್ಷಣ ಏನೋ ಒಂಥರಾ ಹಮ್ಮು ಬಂದಿರುತ್ತದೆ. ಅಪ್ಪನಿಗೆ ಗೊತ್ತಾಗುವುದಿಲ್ಲವೆಂದು ಹಲವು ಬೇಡದ ಸಲಹೆಗಳನ್ನು ಕೊಡಲು ಮುಂದಾಗಿರುತ್ತೇವೆ. ಆದರೆ ಅಪ್ಪ ಬದುಕಿನ ಪಾಠದ ವಿಚಾರದಲ್ಲಿ ವಿಶ್ವವಿದ್ಯಾನಿಲಯ ಅನ್ನುವುದನ್ನು ಮರೆತೇ ಬಿಟ್ಟಿರುತ್ತೇವೆ. ಇಷ್ಟಾದರೂ ನಾವು ಹೇಳುವ ಮಾತನ್ನು ಕೈಕಟ್ಟಿಕೊಂಡು ಒಬ್ಬ ಆದರ್ಶ ವಿದ್ಯಾರ್ಥಿಯ ಥರ ಕೇಳುತ್ತಾರೆ.ನನಗೆ ದೇವರು ಏನಾದರೂ ವರ ಕೊಡುವುದಿದ್ದರೆ ನಾಳೆ ನಾನೂ ಅಪ್ಪನಾದಾಗ ನನ್ನ ಮಗಳು ಏನಾದರೂ ಹೇಳುವಾಗ ಇದೇ ಸಂಯಮದಿಂದ ಕೇಳುವ ಸಹನೆ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. 
             ಮನೆ ಬಿಟ್ಟು ಸ್ವಲ್ಪ ದಿನ ಹೊರಗಿದ್ದಾಗ, ಪಾಲಕರ ಪ್ರೀತಿಯ ಮಹತ್ವ ತಿಳಿಯುತ್ತದೆ. ನನಗೂ ಹಾಗೆ ಆಗಿತ್ತು. ನನ್ನವ್ವ ಶ್ರೇಷ್ಠವಾದ ರುಚಿಯಾದ ಅಡುಗೆ ಮಾಡುತ್ತಾಳೆಂದು ಅರ್ಥವಾಗಿದ್ದೇ ನಾನು ಹೈಸ್ಕೂಲಿಗೆ ಮನೆ ಬಿಟ್ಟು ಬೇರೆ ಕಡೆ ಓದಲು ಹೋದಾಗ. ಹೊರಗಡೆ ಮಾಡುವ ರೊಟ್ಟಿ ನೋಡಿ, ನನ್ನವ್ವನ ರೊಟ್ಟಿ ನೆನಪಾಗುತ್ತಿದ್ದುದೇ ಆಗ. ಪಿ. ಲಂಕೇಶ್ ರ ಅವ್ವ ಪದ್ಯದ ಥರ ನನ್ನವ್ವನ ವ್ಯಕ್ತಿತ್ವ. ನಮ್ಮ ಮನೆಯ ಜಟಕಾ ಬಂಡಿಗೆ ನನ್ನಪ್ಪನ ಜೊತೆ ಇನ್ನೊಂದು ನೊಗಕ್ಕೆ ಹೆಗಲು ಕೊಟ್ಟು ಮುಂದಕ್ಕೆ ನಡೆಸಿದವಳು ನನ್ನವ್ವ. 
             ನನ್ನಣ್ಣನ ಬಗ್ಗೆ ಅಥವಾ ನನ್ನ ಬಗ್ಗೆ ಯಾರಾದರೂ ಪ್ರಶಂಶೆಯ ಮಾತನ್ನಾಡಿದಾಗ ತನ್ನನ್ನೇ ತಾನು ಮರೆತು ರಾಜ ಗಾಭೀರ್ಯ ಮೆರೆವ ವ್ಯಕ್ತಿ ನನ್ನಪ್ಪ. ಅಪ್ಪಾ ಪರೀಕ್ಷೆಯಲ್ಲಿ ಫೇಲಾದೆ ಎಂದಾಗ ಗೆಳೆಯನ ಥರ ಬೈದು ನಂತರ ಕ್ಷಮಿಸಿ ಮುಂದಿನ ಆಯ್ಕೆ ಕೊಡುವ ಜೀವಮಾನದ ಗೆಳೆಯ. ಅದಕ್ಕೆ ಹೇಳಿದ್ದು ಅಪ್ಪ ಅಂದರೆ ಆಕಾಶ ಅಲ್ಲ ಅಪ್ಪ ಭೂಮಿ ಥರ ಅಂತ. 
            ಸ್ನೇಹಿತರೇ, ನಮ್ಮ ಭವಿಷ್ಯಕ್ಕಾಗಿ ಅವರ ಜೀವನವನ್ನೇ ಮುಡಿಪಾಗಟ್ಟ ಅವರ ತ್ಯಾಗಕ್ಕೆ ಪ್ರತಿಯಾಗಿ ಏನನ್ನೂ ಕೊಡಲು ಸಾಧ್ಯವಿಲ್ಲ. ನಮ್ಮ ಒಳ್ಳೆಯ ವ್ಯಕ್ತಿತ್ವವೇ ಅವರ ಕನಸು, ಅದನ್ನು ನನಸಾಗಿಸುವಲ್ಲಿ ಶ್ರಮ ಪಡೋಣ. ಸಾದ್ಯವಾದರೆ ಅವರ ಪಾಠಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ. ಎಲ್ಲರ ಮನೆಯಲ್ಲಿ ಪ್ರೀತಿ ಬಾಂಧವ್ಯದ ಮಧ್ಯೆ ಗೋಡೆಗಳು ಏಳುತ್ತಿರುವ ಈ ಸಮಯದಲ್ಲಿ ಈ ನನ್ನ ಪುಟ್ಟ ಬ್ಲಾಗ್ ಮುದುಡಿದ ಬಾಂಧವ್ಯಗಳಿಗೆ ಚೈತನ್ಯ ತುಂಬುತ್ತದೆಂಬ ಆಶಯದೊಂದಿಗೆ 


--ಅರವಿಂದರಾಜ ಬಿ ದೇಸಾಯಿ. 

Wednesday, July 20, 2016

ನನ್ನ ನೆನಪಿದೆಯಾ ನಿನಗೆ...

"ನನ್ನ ನೆನಪಿದೆಯಾ ನಿನಗೆ... ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ!! ನಿನ್ನದು ಅಂತ ಒಂದು ಬ್ಲಾಗು ಮಾಡ್ಕಂಡಿದಿಯಾ, ಅದರಲ್ಲಿ ಬರೆದು ವರ್ಷವೇ ಕಳೆದು ಹೋಯಿತು" ಅಂತ ನನ್ನ ಬ್ಲಾಗು ನನ್ನ ಕಿವಿಯಲ್ಲಿ ಪಿಸುಗುಟ್ಟಿದಾಗ ನೆನಪಾಗಿದ್ದು ಅದರ ಅಸ್ತಿತ್ವ. ಸರಿ ಬರೆದರಾಯಿತು ಏನಾದರೊಂದು. ಆದರೆ ಏನು  ಬರೆಯುವುದು? ಹೇಗೆ ಶುರು ಮಾಡುವುದು ಅನ್ನುವುದೇ ಮರೆತು ಹೋದಂತಾಗಿತ್ತು. ನಾವು ಮರೆತರೂ ತಾಯಿ ಕನ್ನಡಾಂಬೆ ನಮ್ಮನ್ನು ಮರೆಯುವುದಿಲ್ಲಾ, ಏನಾದರೊಂದು ದಾರಿ ತೊರಿಸುತ್ತಾಳೆಂದು ನಂಬಿ, ಕಾಗದದ ಮೇಲೆ ಪೆನ್ನು ಇಟ್ಟರೆ ಆಗಲೇ ಐದು ಸಾಲು.. ಬ್ಲಾಗು ಬರೆಯುವುದೆಂದರೆ ನನಗೂ ಇಷ್ಟವೇ! ಅದೊಂಥರಾ ಹುಚ್ಚು. ಆದರೆ ಏನು ಮಡ್ಕೊಂಡಿದಿಯಾ ಅಂತ ಯಾರಾದರೂ ಕೇಳಿದಾಗ, ಬ್ಲಾಗು ಬರೀತಿನಿ ಅಂತ ಹೇಳಿದರೆ ಕೂಳಿಗೆ ಏನಾದರೂ ದಾರಿ ಮಾಡಿಕೋ ಅಂತ ಮುಖಕ್ಕೆ ಹೂಡದಂಗೆ ಹೇಳುತ್ತಾರೆ. ನಮಗೂ ನಾಚಿಕೆ ಇಲ್ಲ! ಅವರ ಪುಂಗಿ ಅವರು ಊದಲಿ, ನಮ್ಮ ತಮಟೆ ನಾವು ಬಾರಿಸೋಣ. ಇಂಜಿನಿಯರಿಂಗ್ ನಲ್ಲಿದ್ದಾಗ ಅದೇನೋ ಗೊತ್ತಿಲ್ಲ ತುಂಬಾ ಸಮಯ ಇರ್ತಾ ಇತ್ತು. ತುಂಬಾ ಓದ್ತಾ ಇದ್ದೆ, ತುಂಬಾ ಬರಿತಾ ಇದ್ದೆ, ಕೆಲವೊಂದನ್ನು ಬ್ಲಾಗಲ್ಲಿ ಹಾಕ್ತಾ ಇದ್ದೆ, ಇನ್ನು ಕೆಲವು ಕೆಳೆದು ಹೋದವು. ಬ್ಲಾಗಿಗೆ ಮೊದಮೊದಲು ತುಂಬಾ ಪ್ರಶಂಸೆಗಳು ಬರ್ತಾ ಇದ್ದವು. ಆಮೇಲೆ ಹಾಡಿದ್ದು ಹಾಡೋ ಕಿಸಬಾಯಿ ದಾಸ ಇವನು ಅಂತ ಸ್ನೆಹಿತರೆಲ್ಲ ಓದುವುದು ಕಡಿಮೆ ಮಾಡಿಬಿಟ್ಟರು. ಏನೋ ಪಾಪ ಸ್ನೇಹಿತ ಬೇಜಾರು ಆಗ್ತಾನೆ ಅಂತ ಲೈಕ್ ಬಟನ್ ಒತ್ತಿ ಬಿಡ್ತಾರೆ ಅಷ್ಟೇ. ಪಕ್ಕದ ಮನೆಗೆ ಬಂದ ನೆಂಟರು ನಮ್ಮ ಮನೆಗೆ ಬರಲಿಲ್ಲ ಅನ್ನೋ ಹಾಗೆ ದಿನವೆಲ್ಲಾ ಫೆಸ್ಬುಕ್ ವಾಟ್ಸಾಪ್ಪ್ ಅವರಿವರ ಪ್ರೊಫೈಲ್ ಚೆಕ್ ಮಾಡೋದು ಬಿಟ್ಟು ಒಂದ್ ನಿಮಿಷ ಬ್ಲಾಗು ಓದಿದರೆ ಎನೋಗುತ್ತೆ ಇವರ ಅಜ್ಜಿ ಗಂಟು. ಮತ್ತೆ ಬುರುಡೆ ಬಿಡೊಕ್ಕೆ ಶುರು ಮಾಡಿದ ಅನ್ಕೊಂಡ್ರು ತಪ್ಪೇನಿಲ್ಲ. ನೆನಪುಗಳ ಬುತ್ತಿ ಬಿಚ್ಚಿ ಇಡುವುದೇ ಇವತ್ತು, ನಿಮ್ಮ ಕರ್ಮ ಓದಿ ಮುಂದೆ. ಇಸ್ರೋ ಲೇಔಟ್ ನಲ್ಲಿದ್ದಾಗ ನೀಲಿ ಶರ್ಟು, ಬಿಳಿಯ ಅಡಿದಾಸ್ ಚಡ್ಡಿ ಹಾಕ್ಕೊಂಡು ಕಿವಿಯಲ್ಲಿ ಹೆಡ್ ಫೋನ್ ಸಿಕ್ಕಿಸಿಕೊಂಡು ಹಂಸಲೇಖ ಸಂಗೀತ ಕೇಳುತ್ತಾ ಬೆಳ್ಳಂಬೆಳಿಗ್ಗೆ 6 ಘಂಟೆಗೆ ನಿರ್ಜನವಾದ ರೋಡುಗಳಲ್ಲಿ ನಡೆಯುತ್ತಾ ಹೊರಟರೆ ಆ ಚುಮು ಚುಮ್ಮು ಚಳಿಯ ತಂಗಾಳಿ, ಒಂದು ಬಿಸಿ ಬಿಸಿ ಕಪ್ ಕಾಫಿ, ಅಬ್ಬಾ! ಅದೇನೋ ಖುಷಿ. ಆವಾಗ ಅನ್ನಿಸ್ತಾ ಇರ್ತಿತ್ತು ಏನಾದರೂ ಬರೀಬೇಕು ಅಂತ. ಅಲ್ಲೇ ಹತ್ತಿರವಿದ್ದ ದೇವಸ್ಥಾನದ ಗಂಟೆ ನಾದ, ಆ ದೇವಸ್ಥಾನಕ್ಕೆ ಬರುತ್ತಿದ್ದ ಸುಂದರ ವದನ ಸಂಪ್ರದಾಯ ವಸ್ತ್ರ ತೊಟ್ಟ ಸಖಿಯರು ಬರುತ್ತಿದ್ದುದನ್ನು ನೋಡುತ್ತಿರುವಾಗಲೇ, ಜಗದ ಚೆಲುವೆಲ್ಲಾ ನಿನ್ನ ಕಣ್ಣಲ್ಲೇ ಅಂತ ಬರೆಯಬೇಕು ಅನಿಸುತ್ತಿತ್ತು. ಹಂಗೆ ಒಂದ್ ಸಲ ಇಲೆಯರಾಜ ಸಂಗೀತ ಹೃದಯದಲ್ಲಿ ರಿಂಗಣಿಸುತ್ತಿತ್ತು. ಅಷ್ಟು ಖಾಲಿ ಇದ್ವಿ ನಾವು ಅವಾಗ. ಅವತ್ತು ಯಾವುದಾದರೊಂದು ಲೇಖನ ಬರಿಲಿಲ್ಲ ಅಂದ್ರೆ ಸಮಾಧಾನ ಇರ್ತಾ ಇರ್ಲಿಲ್ಲ, ಒಳಗಡೆ ಯಾರೋ ಕುಳಿತ ಹಾಗೆ. ಅದನ್ನ ಬರೆದು ತಿದ್ದಿ ತೀಡಿ, ನಾನೊಂದು ಹತ್ತು ಸಲ ಓದಿ ಆಮೇಲೆ ಬ್ಲಾಗಿಗೆ ಬರುತ್ತಾ ಇತ್ತು. ಇವಾಗೆಲ್ಲಾ ಅಷ್ಟು ಸಮಯ ಇಲ್ಲ. ಆದರೂ ಸಮಯ ಬಿಡುವು ಮಾಡಿಕೊಂಡು ಬರೆಯೋಣ ಅಂತ ನಿರ್ಧಾರ ಮಾಡಿದೀನಿ. ಏನಪ್ಪಾ ನಿಂದು? ಕೊನೆಯದಾಗಿ ಏನಾದರೊಂದು ಹೇಳಿ ಸಾಯಿ ಮಾರಾಯ! ಅಂದ್ರಾ!! ಸರಿ ಏನಿಲ್ಲ! ಯಾರ ಖುಷಿಗೆ ನಾನು ಬರೆಯುವುದಿಲ್ಲ. ಕನ್ನಡದ ಹಿರಿಯ ಕವಿ ಹೇಳಿದ ಹಾಗೆ "ನನ್ನ ತಲೆಯ ಕೊನೆಯ ಕೂದಲು ಉದುರುವವರೆಗೂ ಬರೆಯುತ್ತೇನೆ,  ನಿಮಗೆ ಇಷ್ಟವಿದ್ದರೂ ಇಷ್ಟವಿರದಿದ್ದರೂ, ನನಗೆ ತೋಚಿದ್ದನ್ನು ನಾನು ಬರೆಯುತ್ತೇನೆ. ಓದುವುದು ಬಿಡುವುದು ನಿಮ್ಮ ಕರ್ಮ. ಓದುತ್ತಾ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು.

Friday, April 24, 2015

ಮೊಗ್ಗಿನ ಮನಸ್ಸುಗಳ ಮೇಲೆ ದೊಡ್ಡವರ ದರ್ಬಾರ್

ಇತ್ತೀಚಿನ ಕೆಲವೊಂದು ಮಕ್ಕಳ ಮಲಿನ ಸಂಗತಿಗಳು, ನನ್ನನ್ನು ಖಿನ್ನನನ್ನಾಗಿಸಿ ಈ ಲೇಖನ ಬರೆಯುವುದಕ್ಕೆ ದಾರಿಮಾಡಿಕೊಟ್ಟಿವೆ. ನನ್ನಲ್ಲಿರುವ ಕೋಪ ಹೊರಹಾಕುವ ಪ್ರಯತ್ನವೂ ಇರಬಹುದು. 
ಮಕ್ಕಳು ಏನು ಮಾಡಿದರೂ ಚಂದ, ಪುಟ್ಟ ಮಕ್ಕಳ ಮನಸ್ಸು ತಿಳಿ ನೀರು ಇದ್ದ ಹಾಗೆ. ನಾನು ಎಷ್ಟೋ ಸಲ ಮಕ್ಕಳೊಂದಿಗೆ ಮಾತನಾಡುತ್ತಾ, ಅವು ಏನೂ ತಿಳಿಯದೆ ಕೊಡುವ ಚಿಕ್ಕ ಚಿಕ್ಕ ಉತ್ತರಗಳು, ನನ್ನನ್ನು ಮಗುವಾಗಿಸಿ, ತಮ್ಮ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡು ಬಿಡುತ್ತವೆ. ನಮ್ಮಲ್ಲಿ ಮದ, ಮತ್ಸರ, ಕೋಪ, ದ್ವೇಷ, ಕ್ರೋಧ, ಆಸೆ ಹೊತ್ತಿ ಉರಿಯುತ್ತಿರುವಾಗ ಮಕ್ಕಳೊಂದಿಗೆ ಒಂದು ಬೈಠಕ್ ಹಾಕಿ ನೋಡಿ, ನೀವು ಕೂಡಾ ಮಗುವಿನೊಂದಿಗೆ ಮಗುವಾಗುತ್ತೀರಾ. ಇಂಥ ನಿಶ್ಚಲ ನಿರ್ಮಲ ಮನಸ್ಸುಗಳ ಬಿಳಿ ಹಾಳೆಯ ನಾಳೆಗಳು ನಾವು ನೀಡುವ ನೋಟ್ಸ್ ಇದ್ದಂತೆ, ನಾವೇನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕು. 
ಇತ್ತೀಚಿಗೆ ನಡೆದಂಥ ಪೇಷಾವರ ಶಾಲೆಯ ದುರಂತ ಕೂಡಾ ಇದಕ್ಕೊಂದು ತಾಜಾ ಉದಾಹರಣೆ. ಇದಕ್ಕೆ ದರ್ಮಾಂದತೆ ಕಾರಣ. ಇಂಥ ಕ್ರೌರ್ಯದಲ್ಲಿ ಬದುಕುಳಿದ ಮಕ್ಕಳೇ ನಾಳೆ ಇಂಥದೇ ಕ್ರೌರ್ಯದಲ್ಲಿ ತೊಡಗಿದರೂ ಅಚ್ಚರಿಯಿಲ್ಲ. ನಮ್ಮ ಮಕ್ಕಳಿಗೆ ನಾವೇನು ಕಲಿಸುತ್ತಿದ್ದೇವೆ ಎಂದು ಆ ಮತಾಂಧರ ಪೋಷಕರು ಒಂದು ಬಾರಿ ಕೇಳಿಕೊಂಡಿದ್ದರೆ, ಈ ದುರ್ಗತಿಯನ್ನು ನಾವು ಕಣ್ಣಾರೆ ನೋಡುವ ಪರಸ್ಥಿತಿ  ಬಂದೊದಗುತ್ತಿರಲಿಲ್ಲ. ಎಲ್ಲೋ ಮತಾಂಧರು ಏನೋ ಮಾಡುತ್ತಿದ್ದಾರೆ ನಮಗ್ಯಾಕೆ ಬೇಕು ಅಂತಿರಾ ? ನಮ್ಮಲ್ಲಿಯದೇ ಇನ್ನೊಂದು ಸಂಗತಿ ಹೇಳುತ್ತೇನೆ ಕೇಳಿ. 
ಕೆಲವು ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಮೈಸೂರು ಜಿಲ್ಲೆಯ ಕುಪ್ಪೇಗಾಲ ಗ್ರಾಮದಲ್ಲಿ, ದಲಿತ ಮಹಿಳೆಯರು ಮಾಡಿ  ಬಡಿಸಿದ ಬಿಸಿಯೂಟ ಮಾಡಬಾರದೆಂದು ಮನೆಯ ದೊಡ್ಡವರು ಮಕ್ಕಳಿಗೆ ಹೇಳಿ ಶಾಲೆಗೆ ಕಳುಹಿಸಿದ್ದರು ಅಂತ. ಸಾವಿರಾರು ವರ್ಷಗಳ ಹಿಂದಿನಿಂದ ಪಾಲಿಸಿಕೊಂಡು ಬಂದ ಅಸ್ಪೃಶ್ಯತೆಯನ್ನು ನೂರಾರು ವರ್ಷ ವಯಸ್ಸಿನ ಚಳುವಳಿಗಳು ಬೇರು ಸಮೇತ ಕಿತ್ತೊಗೆಯಲು ಸಾದ್ಯವೇ?... ಸಾದ್ಯ ಇದೆ. ನಮ್ಮ ನಿಮ್ಮೆಲ್ಲರ ವಿವೇಕತನದಿಂದ, ಮೌಡ್ಯದಿಂದ ಹೊರಬಂದು, ಮಕ್ಕಳಲ್ಲಿ ನಾವೆಲ್ಲಾ ಒಂದು ಎಂಬ ಭಾವವನ್ನು ಮೂಡಿಸುವುದರಿಂದ. 
 ಅದೇ ದಿನ ವಾರ್ತೆಯನ್ನು ನೋಡುತ್ತಿದ್ದಾಗ, ದೊಡ್ಡವರ ಮಕ್ಕಳು ಮನೆಯಲ್ಲಿ ಮಾಡಿದ ಟಿಫನ್ ಬಾಕ್ಸ್ ಗಳನ್ನು ಕ್ಯಾಮೆರಾ ಮುಂದೆ ಅಲ್ಲಾಡಿಸುತ್ತಿದ್ದಾಗ, ಭಾರತದ ಭವಿಷ್ಯದ ಬುಡವನ್ನೇ ಅಳುಗಾದಡಿಸಿದಂತೆ ಅನಿಸಿತು. ಅರ್ರೆ, ಊರಲ್ಲಿ ಮನೆಯಲ್ಲಿ ಮನಸ್ಸಿನಲ್ಲಿರುವ ಜಾತ್ಯಾಂದತೆಯ ಕಸವನ್ನು ಶಾಲೆಯ ಅಂಗಳಕ್ಕೆ ತಂದು ಸುರಿದರೆ, ಅದೇ ಶಾಲೆಯಲ್ಲಿ ಓದುವ ನಮ್ಮ ಮಕ್ಕಳು 'ಜಾತಿ'ಯ ದುರ್ನಾತದ ನಡುವೆ ನಲುಗುತ್ತಾರೆ ಎಂಬ ಸಣ್ಣ ಅರಿವೂ ನಮಗೆ ಇಲ್ಲದೇ ಹೋದರೆ ಹೇಗೆ? "ಅಸ್ಪ್ರುಶ್ಯತೆ ಎಂಬುದು ಸಾವಿರ ಹೆಡೆಗಳ ಸರ್ಪವಿದ್ದಂತೆ" ಎಂದು ಗಾಂಧಿಜಿಯವರು ಹೇಳಿದ್ದು ನೂರಕ್ಕೆ ನೂರು ಸತ್ಯ. 
ಇದನ್ನು ಸರಿಪಡಿಸುವವರು ಯಾರು? 
ಸರ್ಕಾರ,  ಕಾರ್ಯಾಂಗ, ನ್ಯಾಯಾಂಗ, ಜಾರಿ ನಿರ್ದೇಶನಾಲಯ, ಆಯೋಗಗಳು ತಮ್ಮ ತಮ್ಮಲ್ಲೇ ಹೊಂದಾಣಿಕೆ ಇದ್ದಂತಿಲ್ಲ. ಅದಕ್ಕಾಗಿ ನಾವೇ ಇದರಲ್ಲಿ ಭಾಗಿದಾರರಾಗಬೇಕು. 
ನಮ್ಮ ಮಕ್ಕಳಿಗೆ ನೈತಿಕತೆಯನ್ನು ಹೇಳಿಕೊಡಬೇಕು. ಸಾದ್ಯವಾದರೆ ಜೀವಿಸಿ ತೋರಿಸಬೇಕು. "ದಯವೇ ಧರ್ಮದ ಮೂಲವಯ್ಯಾ, ದಯವಿಲ್ಲದ ದರ್ಮ ಯಾವುದಯ್ಯಾ?" ಎಂಬ ಪಾಠವನ್ನು ಮುಸ್ಲಿಂ ಧರ್ಮ ಸೇರಿದಂತೆ ಎಲ್ಲ ಧರ್ಮಗಳೂ ಹೇಳಿಕೊಡಬೇಕು. 
ಇನ್ನು ಭಾರತದ ಭಯೋತ್ಪಾದನೆ ಯಾದಂಥ 'ಜ್ಯಾತ್ಯಂಧತೆ'ಯನ್ನು ಮಟ್ಟ ಹಾಕಬೇಕಾದರೆ, ದಲಿತ ಸಮಾರಂಭಗಳಿಗೆ ಮೇಲ್ವರ್ಗದವರು ಹೋಗಬೇಕು, ಗೃಹಪ್ರವೇಶ ಆಗಬೇಕು, ದೇವಸ್ಥಾನಗಳಲ್ಲಿ ದಲಿತರನ್ನು ಪೂಜಿಸಲು ಬಿಡಬೇಕು, ಅಂತರ್ ಜಾತಿ ವಿವಾಹಗಳು ಆಗಬೇಕು. ಈ ಎಲ್ಲಾ ವಿಷಯಗಳು ಇಂದಿನ ಮಕ್ಕಳ, ನಾಳೆಯ ನಾಗರೀಕರ ಸರಿ ದಾರಿಯಲ್ಲಿ ನಡೆಯಲು ಉಪಯೋಗವಾಗುವ ದಾರಿದೀಪಗಳು. 
ಮುದ್ದು ಮಕ್ಕಳ ಮನಸ್ಸುಗಳೊಂದಿಗೆ ಮಾತನಾಡುತ್ತಾ ಮಗುವಾಗುತ್ತಾ ಮುಗ್ಧತೆಯನ್ನು ಕಲಿತು ಉಳಿಸಿ ಬೆಳೆಸಿ ಎಂದು ಹೇಳುತ್ತಾ, ಮನಸ್ಸಿಗೆ ಹಿಡಿಸಿದರೆ ಮಕ್ಕಳಿಗೆ ಕಲಿಸಿ, ಹಿಡಿಸದಿದ್ದರೆ ನನಗೆ ತಿಳಿಸಿ. ಜೈ ಭಾರತ್ ಮಾತೆ 
-- ಅರವಿಂದರಾಜ್ ಬಿ ದೇಸಾಯಿ   

Monday, April 20, 2015

ಪೇಷಾವರ ದುರಂತ : ಖಂಡಿಸಲು ಪದಗಳೇ ಸಾಲದು

(Dec 16 ರಂದು ಈ ಲೇಖನ ಬರೆದದ್ದು)
ಈ ದಿನ ನಡೆದ ದುರಂತವನ್ನು, ಯಾವ ರೀತಿ ವಿವರಿಸಲಿ.? ಬಹುಶ ನನ್ನ ಎಲ್ಲಾ ಲೇಖನಗಳನ್ನು ಬರೆಯುವುವಾಗ ಇಷ್ಟೊಂದು ಕೈ ಯಾವತ್ತೂ ನಡುಗಿರಲಿಕ್ಕಿಲ್ಲ. ಇಷ್ಟೊಂದು ಸಿಟ್ಟು, ದ್ವೇಷ, ಕ್ರೋಧ ಮಡುಗತ್ತಿರಲಿಕ್ಕಿಲ್ಲ. ಮನಸ್ಸು ಅಳುತ್ತಾ ಇದೆ. ಕಣ್ಣೀರಿನ ಕಟ್ಟೆ ಒಡೆಯುವುದೊಂದೇ ಬಾಕಿ. ತಾಲಿಬಾನ್ ಉಗ್ರ ಸಂಘಟನೆಯೊಂದು ಪೇಷಾವರದಲ್ಲಿನ ಮುದ್ದು ಮಕ್ಕಳು ಜ್ಞಾನ ಪಡೆಯುವಂಥ ಜ್ಞಾನ ಮಂದಿರಕ್ಕೆ ನುಗ್ಗಿ, ಮುಗ್ಧ ಮನಸ್ಸುಗಳನ್ನು ಎಲ್ಲಂದರಲ್ಲಿ ಛಿಧ್ರಗೊಳಿಸಿ, ಅವರ ಶಿಕ್ಷಕಿಯರನ್ನು ಬಾಂಬಿನಿಂದ ಧ್ವಂಸಗೊಳಿಸಿ, ಜಿಹಾದ್ ಹೆಸರಿನಲ್ಲಿ ಮಾರಣಹೋಮ ನಡೆಸಿದ ಉಗ್ರರನ್ನು ಬಯ್ಯಲು ಪದಗಳು ಸಾಲುತ್ತಿಲ್ಲ. ಉಗ್ರರು ಇಂದು ಮಾನವಿಯತೆಯ ಎಲ್ಲೆ ಮೀರಿ ವರ್ತಿಸಿದ್ದಾರೆ.
ನಾನು ಈ ದಿನ ಯಾವ ಕಾರಣ ಕೇಳಲು ತಯಾರಿಲ್ಲ. ಉಗ್ರರ ಸಬೂಬುಗಳನ್ನು ಕೇಳಲು ಮನಸ್ಸಿಲ್ಲ. ಪ್ರತಿಯೊಂದು ಕ್ರೌರ್ಯಕ್ಕೆ ನೂರೆಂಟು ಕಾರಣಗಳಿರಬಹುದು. ಅವೆಲ್ಲವನ್ನು ತೀರಿಸಿಕೊಳ್ಳಲು ಮುಗ್ಧ ಮಕ್ಕಳ ಮೇಲೆ ಯುದ್ಧ ಮಾಡುವ ಅವಶ್ಯಕತೆಯೇನಿತ್ತು. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರೊಂದಿಗೆ ನನ್ನ ಪ್ರಾರ್ಥನೆ ಇದೆ. ಮನಸ್ಸಿನಲ್ಲಿ ದೇಶದ್ರೋಹಿಗಳ ಮೇಲೆ ಹೇಳಿಕೊಳ್ಳಲಾರದಷ್ಟು ಕೋಪ ಇದೆ. ಒಂದಲ್ಲ ಎರಡಲ್ಲಾ ಸುಮಾರು 140 ಮಕ್ಕಳ ಮಾರಣಹೋಮ. ಇದರಲ್ಲಿ ಮಕ್ಕಳ ತಪ್ಪೇನಿತ್ತು. ಪ್ರತಿಕಾರ ತಿರಿಸಿಕೊಳ್ಳಲು ಮಕ್ಕಳೇ ಆಗಬೇಕಿತ್ತಾ.? ಜಗತ್ತಿನ ನೀಚ ಕೆಲಸಗಳಲ್ಲಿ ಇದಕ್ಕಿಂತ ಇನ್ನೊಂದು ಉದಾಹರಣೆಯನ್ನು ನಾನೆಂದು ಕೇಳಿಲ್ಲ, ನೋಡಿಲ್ಲ. ದೇವರು ಅಂತ ಯಾರಾದರೊಬ್ಬರು ಇದ್ದರೆ, ನನ್ನ ಪ್ರಾರ್ಥನೆ ಇಷ್ಟೇ!, ನಾವು ಬದುಕಿರುವ ತನಕ ಇಂಥ ಘಟನೆ ಮರುಕಳಿಸದಿರಲಿ. ಒಂಭತ್ತು ರಾಕ್ಷಸರು ಶಾಲೆಯ ಒಳಹೊಕ್ಕು, ಪಾಯಿಂಟ್ ಬ್ಲಾಂಕ್ ನಲ್ಲಿ ಮಕ್ಕಳ ತಲೆಗೆ ಗುರಿಯಿಟ್ಟು ಬಂದೂಕುಗಳ ಮಳೆ ಸುರಿಸಿದಾಗ, ಪ್ರತಿಯೊಂದು ತರಗತಿಯಲ್ಲಿ ಕುಳಿತ ಮಕ್ಕಳ ಮೇಲೆ ಗುಂಡಿನ ನರ್ತನವಾದಾಗ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಬೆಂಚಿನ ಕೆಳಗೆ ಕುಳಿತ ಮಕ್ಕಳನ್ನು ಹೊರಗೆ ಎಳೆದು ಕೊಂದಾಗ, ಕೆಲವರ ತಲೆಗೆ ಕಣ್ಣಿಗೆ ನಿಶಾನೆಯನ್ನು ಫಿಕ್ಸ್ ಮಾಡಿ ಮೂರು ಘಂಟೆಯೊಳಗೆ ರುದ್ರತಾಂಡವ ಮಾಡಿ ಮಂದಿರವನ್ನು ಸ್ಮಶಾನ ಮಾಡಿದರು ಉಗ್ರರು.
ಕೆಲ ಶಿಕ್ಷಕರು ಮಡಿದರು, ಕೆಲವರ ಮಕ್ಕಳು ಶವವಾಗಿ ಹಿಂತಿರುಗಿದರು, ಕೆಲವರ ದೇಹಗಳು ಆಸ್ಪತ್ರೆಯಲ್ಲಿ ಸಿಕ್ಕವು. ಕೆಲವರ ಮಕ್ಕಳು ಶಾಲೆಗೆ ಹೋಗದೇ ಪ್ರಾಣ ಉಳಿಸಿಕೊಂಡ ತಂದೆ ತಾಯಂದಿರು ಉಳಿದ ಮಕ್ಕಳ ಕ್ಷೇಮಕ್ಕಾಗಿ ಈ ದಿನ ಮತ್ತೆಂದೂ ಬರದಿರಲೆಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ಬೆಳಿಗ್ಗೆ ಬೆಳಿಗ್ಗೆ ಎದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗಲೂ ಇಂಥದೊಂದು ದುರಂತ ನಡೆಯಬಹುದೆಂದು ಊಹಿಸಿರಲಿಕ್ಕಿಲ್ಲ. ಅಪ್ಪಾ ಅಮ್ಮಾ, ನಾನು ಶಾಲೆಗೆ ಹೋಗಿ ಬರ್ತೀನಿ ಎಂದು ಮಗು ಹೇಳಿದಾಗ, ಇದೇ ಆ ಮಗುವಿನ ಕೊನೆಯ ಮಾತುಗಳೆಂದು ಯಾರೂ ಊಹಿಸಿರಲಿಕ್ಕಿಲ್ಲ.
ನಾನು TV ನೋಡುತ್ತಿದ್ದಾಗ, ಪಾಪ TV anchor ಗಳೂ, ಸುದ್ದಿ ಓದುತ್ತಿರಬೇಕಾದರೆ ಕನ್ನೀರಿಟ್ಟುಬಿಟ್ಟರು. ಒಳಗಿದ್ದ ಉಗ್ರರಿಗೆ, ಸಂದೇಶ ನೀಡುತ್ತಿದ್ದ ಅವರ ಮುಖ್ಯಸ್ಥನ ಮಾತುಗಳನ್ನು ನೀವೊಮ್ಮೆ ಕೇಳಿಸಿಕೊಂಡರೆ, ಅಸಹಾಯಕರಾಗಿ ಅತ್ತು ಬಿಡುತ್ತಿರೆನೋ? ಯಾವ ತಂದೆ ತಾಯಂದಿರು ಎಂಥ ದೊಡ್ಡ ಪಾಪ ಮಾಡಿದರೆ ಇಂಥ ಉಗ್ರರು ಅವರ ಹೊಟ್ಟೆಯಲ್ಲಿ ಹುಟ್ಟುತ್ತಾರೆನೋ ತಿಳಿಯದು. ನಾವು ಮನೆಯಲ್ಲಿರುವಾಗ ಕೊಲೆ, ಸುಲಿಗೆಯಂಥ ಪ್ರೋಗ್ರಾಮ್ ಗಳು TV ಯಲ್ಲಿ ಬಂದಾಗ ಮಕ್ಕಳನ್ನು ಅದರಿಂದ ದೂರ ಇಡುತ್ತೇವೆ. ಅಂಥದರಲ್ಲಿ ಈ ದಿನ ಮಕ್ಕಳೇ ಕೊಲೆ, ಮಾರಣಹೋಮ ಹೇಗಾಯಿತೆಂದು ವಿವರಿಸುತ್ತಿರುವಾಗ ಕರುಳು ಕಿತ್ತು ಬರುತ್ತಿತ್ತು. ಈ ಆತಂಕವಾದಿಗಳನ್ನು ಯಾವ ಪದಗಳಿಂದ ನಿಂದಿಸಬೇಕೋ ಅರ್ಥವಾಗುತ್ತಿಲ್ಲ.
ಒಂದು ಚಾನೆಲ್ ನಲ್ಲಿ, ಸಾವಿನ ಬಾಯಿಂದ ಬದುಕುಳಿದು ಬಂದ ಒಂದು ಮುಗ್ಧ ಮಗು ಧೈರ್ಯದಿಂದ "ದೊಡ್ಡವನಾದ ಮೇಲೆ, ಆ ದೇಶದ್ರೋಹಿಗಳನ್ನು ಹುಡುಕಿ ಹುಡುಕಿ ಹೊಡೆಯುತ್ತೇನೆ" ಎಂದು ಹೇಳುವಾಗ ಅವನ ಧೈರ್ಯ ನೋಡಬೇಕಿತ್ತು ನೀವು. He was great. ಮಕ್ಕಳ ಮೇಲೆ ಇಂಥಹ ದೌರ್ಜನ್ಯ ನಡೆಯುವಾಗ ನೋಡುತ್ತಾ ಕುಳಿತಾಗ ನಾವೆಂಥಾ ಗಂಡಸರು.? ನಮ್ಮ ಮಕ್ಕಳನ್ನು ಸುರಕ್ಷತೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಅಲ್ಲವಾ? ನಮ್ಮ ಪ್ರಾಣವನ್ನು ಜಿದ್ದಿಗೆ ಇಟ್ಟರೂ ಚಿಂತೆಯಿಲ್ಲ. ಅವರ ಪ್ರಾಣಕ್ಕೆ ಕಿಂಚಿತ್ತೂ ಹಾನಿಯಾಗಬಾರದು. ಈ ದಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಇಡೀ ವಿಶ್ವವೇ ಕೊರಗುತ್ತಿದೆ. ಇವತ್ತಿನ ಈ ದಿನ ಮುಗ್ಧ ಮಕ್ಕಳ ಮೇಲಿನ ದೌರ್ಜನ್ಯದ ಕರಾಳ ದಿನವಾಗದೇ, ಉಗ್ರರ ಮೇಲಿನ ಹೋರಾಟಕ್ಕೆ ಸ್ಪೂರ್ಥಿಯಾಗಬೇಕು. ಈ ದಿನ ಮಕ್ಕಳನ್ನು ಕಳೆದುಕೊಂಡವರ ತಂದೆ ತಾಯಂದಿರ ಧೈರ್ಯ ತುಂಬುವ ದಿನವಾಗಬೇಕು. ಉಗ್ರರು ನಾಗರಿಕತೆಯನ್ನು ಮರೆತು ದಾಳಿ ಮಾಡಿದ್ದರ ಪ್ರತೀಕಾರದ, ಛಲದ ದಿನವಾಗಬೇಕು, ಉಗ್ರರನ್ನು ಮಟ್ಟ ಹಾಕುವ ದಿಟ್ಟ ನಡೆಯ ದಿನವಾಗಬೇಕು. ಜಗತ್ತಿನ ದೇಶಗಳೆಲ್ಲ, ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡಂತೆ ಎಂದು ಭಾವಿಸಿ, ಭಯೋತ್ಪಾದನೆಯನ್ನು ಸಾಮಾಜಿಕ ಪಿಡುಗಾಗಿ ಭಾವಿಸಿ, ಹೋರಾಟ ಮಾಡಬೇಕು. ಬಂದೂಕುಗಳಿಗೆ ಬಂದೂಕುಗಳಿಂದಲೇ ಉತ್ತರ ನೀಡಬೇಕು. ಅದೇ ನಾವು ಆ ಮಕ್ಕಳಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.
ತುಂಬಾ ಭಾರವಾದ ಮನಸ್ಸಿನಿಂದ, ಯಾರ ಜೀವನದಲ್ಲೂ ಇಂಥಾ ಕರಾಳ ದಿನ ಬರದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ - ಅರವಿಂದರಾಜ ಬಿ ದೇಸಾಯಿ. 

Wednesday, March 4, 2015

ಪ್ರಾಥಮಿಕ ಶಿಕ್ಷಣ: ವೈಫಲ್ಯದ ಹೊಣೆ ಹೊರುವವರು ಯಾರು?

ಶಿಕ್ಷಣ, ಅದರಲ್ಲೂ ಪ್ರಾಥಮಿಕ ಶಿಕ್ಷಣ ಅನ್ನುವುದು ಬಹಳ ಗಂಭೀರ ವಿಷಯ, ಇಂಥಹ ವಿಷಯದ ಬಗ್ಗೆ ಬ್ಲಾಗ್ ಬರೆಯುವಾಗ ತುಂಬಾ ಜಾಗರೂಕತೆಯಿಂದ ಬರೆಯಬೇಕೆಂಬ ಅರಿವು ನನಗಿದೆ. ಇದು ನನ್ನ ಆಸಕ್ತಿ ವಿಷಯ ಕೂಡ ಹೌದು. ನನ್ನ ಅಪ್ಪಾಜಿಯವರು ಪ್ರಾಥಮಿಕ ಶಾಲಾ ಶಿಕ್ಷಕರು. ನಾನು ಮತ್ತೂ ನನ್ನ ಅಪ್ಪಾಜಿ ಆಪ್ತಮಿತ್ರರಿಗಿಂತ ಹೆಚ್ಚು. ನಾನು ಊರಿಗೆ ಹೋದಾಗ ಯಾವುದೇ ಮುಚ್ಚುಮರೆಯಿಲ್ಲದೇ ಎಲ್ಲ ವಿಷಯಗಳ ಬಗ್ಗೆ ವಾಕಿಂಗ್ ನೆಪದಲ್ಲಿ, ಮನೆಯಲ್ಲಿ ಕುಳಿತಾಗ, ಎಲ್ಲೆಂದರಲ್ಲಿ ಶಿಕ್ಷಣ, ಸಮಾಜ,ಧರ್ಮ, ಕ್ರಿಕೆಟ್, ರಾಜಕೀಯದ ಬಗ್ಗೆ ಹರಟುತ್ತಲೇ ಇರುತ್ತೇವೆ. ಶಿಕ್ಷಣ ಮುಕ್ತವಾಗಿ ಚರ್ಚೆಗೆ ಬರುವ ವಿಷಯ. ಇಲ್ಲಿ ಬರೆಯುವ ವಿಷಯ ಅವರಿಂದ ಸ್ಪೂರ್ತಿಗೊಂಡವು.
          ಗ್ರಾಮೀಣ ಶಾಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಹೃದಯಗಳು. ಪ್ರಾಥಮಿಕ ಶಾಲೆಗಳ ಬಗ್ಗೆ ನಮಗೆ ತಿಳಿದಿರುವುದಾರೂ ಏನು? ಮಧ್ಯಾನ್ಹದ ಬಿಸಿಯೂಟ, ಸಮವಸ್ತ್ರ, ಉಚಿತ ಟೆಕ್ಸ್ಟ್ ಬುಕ್ಸ್, ಸಮವಸ್ತ್ರ, ಕ್ಷೀರಭಾಗ್ಯ, ಎಲ್ಲಾ ಫ್ರೀ ಫ್ರೀ ಫ್ರೀ. ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಯಾರು ಬಲ್ಲರು? ಸರ್ವ ಶಿಕ್ಷಣ ಅಭಿಯಾನ ಸೇರಿ ಹಲವಾರು ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಟ್ಯಂತರ ಹಣ ಖರ್ಚು ಮಾಡುತ್ತವೆ. ಶೈಕ್ಷಣಿಕ ಯೋಜನೆಗಳಿಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗುತ್ತಿಲ್ಲ. 5ನೇ ತರಗತಿ ವಿಧ್ಯಾರ್ಥಿಗೆ 2ನೇ ತರಗತಿಯ ಪುಸ್ತಕ ಓದಲು ಬರುವುದಿಲ್ಲ, ಐದು ಮಂದಿಯಲ್ಲಿ ಕನಿಷ್ಠ ಇಬ್ಬರಿಗೆ 11ರಿಂದ 99ರ ವರೆಗಿನ ಸಂಖೆಗಳನ್ನು ಗುರುತಿಸಲು ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಎಡವುತ್ತಿರುವುದಾದರೂ ಎಲ್ಲಿ? ಕಲಿಕೆ ಯಾವ ಮಟ್ಟಕ್ಕಿದೆ ಎಂಬುದು ಆ ದೇವರೇ ಹೇಳಬೇಕು. ಈ ವೈಫಲ್ಲ್ಯಕ್ಕೆ ಹೊಣೆ ಯಾರು? ಶಿಕ್ಷಕರಾ? ಶಿಕ್ಷಣ ಏಲಾಖೆನಾ? S.D.M.C? ಆಧಿಕಾರಿಗಳಾ? ಸರ್ಕಾರವಾ? ಸಮಾಜವಾ?. ವೈಫಲ್ಲ್ಯಕ್ಕೆ ಎಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಭಾಗಿದಾರರೇ. ಶಿಕ್ಷಣದಲ್ಲಿ ಎಲ್ಲರ ಪಾತ್ರಗಳ ಬಗ್ಗೆ ಸಕಾರಾತ್ಮಕ ಚರ್ಚೆಯಾಗಬೇಕು.
           ಮೊದಲಿಗೆ ಸರ್ಕಾರ ಮತ್ತು ಅದರ ಯೋಜನೆಗಳ ಬಗ್ಗೆ ಮಾತನಾಡುವುದಾದರೆ, 1986ರಲ್ಲಿ ಒಂದು ಶಾಲೆಗೆ ಪ್ರಾಥಮಿಕ ಅವಶ್ಯಕತೆಗಳಾದ ಏರಡು ಕೋಣೆ, ಇಬ್ಬರು ಶಿಕ್ಷಕರು, ಅವರಿಗೆ ಟ್ರೈನಿಂಗ್ ಮತ್ತು ಶಾಲೆಗೊಂದು ಮೈದಾನ ಇರಲೇಬೇಕೆಂಬ ಕಡ್ದಾಯದೊಂದಿಗೆ ಕಪ್ಪು ಹಲಗೆ ಕಾರ್ಯಾಚರಣೆಯನ್ನು ತಂದರು. ಈಗ ಸರ್ವ ಶಿಕ್ಷಣ ಅಭಿಯಾನ ಮತ್ತು RTE ಯೋಜನೆಗಳು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಿವೆ. ಆದರೂ ಏರು ಗತಿಯ ಸುಧಾರಣೆ ಏನು ಆಗಿಲ್ಲ ಅನ್ನುವುದೂ ಸತ್ಯ. ಸರ್ಕಾರದ ವಿಧ್ಯಾರ್ಥಿಗಳ ಮೇಲಿನ ಪ್ರಯೋಗಗಳೇ ನಿಧಾನ ಗತಿಗೆ ಕಾರಣ ಇರಬಹುದು. SSA ಅನುಷ್ಟಾನವಾದಾಗ ರಾಜ್ಯದ ಸುಮಾರು 26,000ಶಾಲೆಗಳ ಪೈಕಿ 5,000 ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಿತು. ಅಲ್ಲಿ ಸರಿಯಾದ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲದೆ ಮಕ್ಕಳ ಸ್ಥಿತಿ ICU ನಲ್ಲಿರುವ ರೋಗಿಯಂತಾಗಿದೆ. ಮೊದಲು ವಿಷಯಕ್ಕೊಂದು ಪುಸ್ತಕ ಇರುತ್ತಿತ್ತು, ಆಮೇಲೆ ತ್ರೈಮಾಸಿಕ, ಈಗ ಸೆಮೆಸ್ಟರ್. ಯಾಕೀ ಪ್ರಯೋಗಗಳು? ಇನ್ನು ನಲಿ-ಕಲಿ. 1ನೇ ತರಗತಿಯಲ್ಲಿ ಸುಮಾರು 967 ಕಾರ್ಡ್, 2ನೇ ತರಗತಿಯಲ್ಲಿ 985 ಕಾರ್ಡ್. ಅದರಲ್ಲಿನ ಮೆಟ್ಟಿಲು, ಸಾಧನೆ. ಏನಿವು? ಪ್ರಾಥಮಿಕ ಶಿಕ್ಷಣಕ್ಕೆ ಹೊರಗಿನವನಾದ ನನಗೆ, ಈ ಕಲಿಕೆಯ ಅಗತ್ಯತೆಯ ಬಗ್ಗೆ ಇನ್ನು ತಿಳಿದಿಲ್ಲ. ನಲಿ-ಕಲಿ ಯಲ್ಲಿ ಮಕ್ಕಳು ಮನೆಗೆ ಪುಸ್ತಕ ತೆಗೆದುಕೊಂಡು ಹೋಗುವ ಹಾಗಿಲ್ಲವಂತೆ. ಪುಸ್ತಕಗಳು ಮಗುವಿನ ಮತ್ತು ಪಾಲಕರ ನಡುವಿನ ಸೇತುವೆಯಂತೆ ಇರುತ್ತವೆ. ಇನ್ನು ನಾವು ಕಲಿತ ಅ, ಆ,ಇ,ಈ ಗೂ ಈಗಿನ ರ,ಗ,ಸ,ದ,ಅ ಗೂ ಸಂಬಂಧವೇ ಇಲ್ಲ. ಯೋಜನೆ ಬಗ್ಗೆ ಪಾಲಕರಿಗೆ ತಿಳಿಸುವ ಸೌಜನ್ಯ ಕೂಡ ಇಲಾಖೆಗೆ ಇಲ್ಲದೆ ಹೋದರೆ ಹೇಗೆ? ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಭಾಗಿದಾರರಾಗುವುದು ಬೇಡವಾ?
          ಈಗ ಶಿಕ್ಷಕರ ಮತ್ತು ಅವರ ಸವಾಲುಗಳ ಬಗ್ಗೆ ಹೇಳುವುದಾದರೆ. ಶಿಕ್ಷಕರು ಸಮಾಜದ ಮತ್ತು ಇಲಾಖೆಯ ನಡುವಿನ ಕೊಂಡಿಯಿದ್ದಂತೆ. ಹಳ್ಳಿಯ ಶಾಲೆಗಲ್ಲಿ ಹಾಜರಾತಿಯದೇ ದೊಡ್ಡ ಕೊರತೆ. ದಾಖಲಾತಿ ವರ್ಷಕ್ಕೊಮ್ಮೆ ಹೇಗೋ ಮಾಡಬಹುದು. ಆದರೆ ಹಾಜರಾತಿ? ಅದು ವರ್ಷಪೂರ್ತಿ. ಹಳ್ಳಿಗಳಲ್ಲಿ ಒಕ್ಕಲುತನ ಮನೆತನಗಳು, ಗುಳೇ ಹೋಗುವವರು, ಚಿಕ್ಕ ಮಕ್ಕಳನ್ನು ಎತ್ತಿಕೊಳ್ಳಲು ಮನೆಯಲ್ಲಿ ಉಳಿಯುವ ಹುಡುಗಿಯರು, ಬಾಲಕಾರ್ಮಿಕರಾಗಿ ಕೆಲಸಕ್ಕೆ ಹೋಗುವವರು, ಬಾಲ್ಯ ವಿವಾಹವಾಗಿ ಗಂಡನ ಮನೆಗೆ ಹೋಗುವ ಮಕ್ಕಳನ್ನು ಕರೆತರುವವರು ಯಾರು? ಕೊನೆಗೆ ಇವುಗಳ ಒಟ್ಟಾರೆ ಪರಿಣಾಮ ಎದುರಿಸುವವರು ಶಿಕ್ಷಕರೇ. ಮಕ್ಕಳ ಹಾಜರಾತಿಗೆ, ಬಿಸಿಯೂಟ ತಯಾರು ಮಾಡುವುದಕ್ಕೆ, ಅದರ document maintain ಮಾಡುವುದಕ್ಕೆ, ಕ್ಷೀರ ಭಾಗ್ಯದಲ್ಲಿ ಮಕ್ಕಳಿಗೆ ಹಾಲು ಕುಡಿಸುವವರು, ಕೋಳಿಗಣತಿ, ದನಗಣತಿ, ಜನಗಣತಿ, ಸರ್ಕಾರದ ಎಲ್ಲ ಕಡತಗಳಿಗೆ ಉತ್ತರ, ಹೀಗೆ ಇಲಾಖೆಯ ಎಲ್ಲ ಕಾರ್ಯಗಳಿಗೆ ಕುತ್ತಿಗೆ ನೀಡುತ್ತಿರುವವರು ಶಿಕ್ಷಕರೇ. ಒಂದು ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಒಬ್ಬ ತಲೆ ಕೆಟ್ಟ ಜಿಲ್ಲಾ ಪಂಚಾಯ್ತಿ ಅಧಿಕಾರಿ, ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛ ಮಾಡಿಸಿದ್ದಕ್ಕಾಗಿ ಶಿಕ್ಷಕನನ್ನು ಅಮಾನತಿನಲ್ಲಿಟ್ಟ ನೆನಪು ಈಗಲೂ ಎಲ್ಲರಿಗೂ ಇರಬಹುದು. ಅರ್ರೇ!! ತಮ್ಮ ಶಾಲೆಯನ್ನು ಮಕ್ಕಳು ಶುಚಿಯಾಗಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ? ಅದನ್ನು ಶಿಕ್ಷಕರೇ ಮಾಡಬೇಕಾ? ಶಿಕ್ಷಣ ನಿಂತ ನೀರಲ್ಲ. ಬದಲಾವಣೆಗಳು ಅವಶ್ಯ. ಹಾಗಂತ ಅಧಿಕಾರಿಗಳು ದಿನಕ್ಕೊಂದು ಸುತ್ತೋಲೆ ಹೊರಡಿಸಿ, ಬದಲಾವಣೆ ಆಗಿಬಿಡಬೇಕು ಎಂದರೆ ಆಗಿಬಿಡುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಬರುವ IAS ಅಧಿಕಾರಿಗಳು ತಮ್ಮದೇ ಆದ ಒಂದು ಸೆಟ್ ಕಾರ್ಯಕ್ರಮಗಳನ್ನು ಕೆಳಹಂತಕ್ಕೆ ರವಾನಿಸಿ ಬಿದುತ್ತಾರೆ. ಈಗಾಗಲೇ ಇಂಥ ಕಾರ್ಯಕ್ರಮಗಳು ಇವೆಯಾ ಅಂತ ಯೋಚನೆ ಯೋಚನೆ ಕೂಡ ಮಾದುವುದಿಲ್ಲ. ಇವೆಲ್ಲದರ ಪರಿಣಾಮ ಏಣಿಯ ಕಟ್ಟಾ ಕಡೆಯಲ್ಲಿ ಕೆಲಸ ಮಾಡುವ ಶಿಕ್ಷಕ ಒತ್ತಡಕ್ಕೆ ಸಿಕ್ಕಿ ಬಿಳುತ್ತಾನೆ. ಯಾವುದಾದರೂ ಪ್ರಾಥಮಿಕ ಶಾಲೆಗೆ ಹೋಗಿ ನೋಡಿದಾಗಷ್ಟೇ, ಕಳೆದ ಒಂದು ದಶಕದಲ್ಲಿ ಎಷ್ಟು ಕಾರ್ಯಕ್ರಮಗಳ ಬಗ್ಗೆ ದಾಖಲೆ ನಿರ್ವಹಿಸಬೇಕೆಂಬುದು ತಿಳಿಯುತ್ತದೆ. ಆದ್ದರಿಂದಲೇ ದಾಖಲೆಗಳ ನಿರ್ವಹಣೆ ಚೆನ್ನಾಗಿ ಆಗುತ್ತದೆ. ಕಲಿಕೆ? 'ಕೋಡಗನ ಕೋಳಿ ನುಂಗಿತ್ತಾ' ಎನ್ನುವಂತೆ, ದಾಖಲೆ ನಿರ್ವಹಣೆ ಕಲಿಕೆಯನ್ನು ನುಂಗಿ ಹಾಕಿದಂತಾಗಿದೆ.
          ಶಿಕ್ಷಕರ ತರಬೇತಿಗಾಗಿ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಖರ್ಚು ಆಗುತ್ತಲೇ ಇದೆ, ಗುಣಮಟ್ಟ? ಜಿಲ್ಲಾ ಡಯಟ್ ಗಳು, DPEPಯ ಕೊಡುಗೆಯಾಗಿ ತಾಲೂಕಿನಲ್ಲಿ BRC (Block Resource Center), ಹೋಬಳಿಗಳ ಪ್ರತೀಕವಾಗಿ CRC (Cluster Resource Center) ಸಂಸ್ಥೆಗಳು ನಡೆಸುವ ತರಬೇತಿಯ ಗುಣಮಟ್ಟದ ಕೊರತೆ ಇದೆ. ತರಬೇತಿ ನೀಡುವವರು ಚೆನ್ನಾಗಿ ಹೋಂವರ್ಕ್ ಮಾಡಿರುವುದಿಲ್ಲ. ಜಿಲ್ಲಾ DDPI ಗಳು ಇದು ನಮ್ಮ ಕೆಲಸ ಅಲ್ಲ ಅಂತಲೇ ಭಾವಿಸುತ್ತಾರೆ. ಹೀಗಾಗಿ ಗುಣಮಟ್ಟದ ಹೊಣೆ ಯಾರದ್ದು? ಇಂಥ ತರಬೇತಿಗಳಲ್ಲಿ ಶಿಕ್ಷಕರಿಗೆ ಸಿಗಬೇಕಾದ  ಕನಿಷ್ಠ DA ಕೂಡ ಸಿಗುವುದಿಲ್ಲ, ಸಾಮೂಹಿಕವಾಗಿ ಊಟ ಮಾಡಿಸಿ ಕಳುಹಿಸುವ ಅಧಿಕಾರಿಗಳು ಅಲ್ಲಿದ್ದಾರೆ. ತರಬೇತಿಗೆ ಬರುವ ಶಿಕ್ಷಕರನ್ನು ಹಿಂದಿನ ದಿನ ಸಂಪರ್ಕಿಸಿ ಆಹ್ವಾನಿಸುತ್ತಾರೆ. ಅವರಿಗೆ ಅಲ್ಲಿ ನಡೆಯುವ ಸಾಹಿತ್ಯದ ಪ್ರತಿಗಳನ್ನೇ ಕೊಡುವುದಿಲ್ಲ. ಈ ತರಬೇತಿಗಳ ನಿರ್ವಹಣೆಯ ಬಗ್ಗೆ ಯಾರಾದರು ಆ ಕೇಂದ್ರಕ್ಕೆ ಭೇಟಿ ನೀಡಿದಾಗಲೇ ಅದು ಅರ್ಥವಾಗುತ್ತದೆ. ಪ್ರತಿಭಾವಂತ ಶಿಕ್ಷಕರು ರಾಜ್ಯದ ಮೂಲೆ ಮೂಲೆಯಲ್ಲಿರುತ್ತಾರೆ, ಅವರನ್ನು ಒಂದೆಡೆ ಸೇರಿಸಿ ತರಬೇತಿ ಕ್ಷೆತ್ರವೇಕೆ, ಇಡೀ ಶಿಕ್ಷಣ ಕ್ಷೇತ್ರಕ್ಕೆ ಒಂದು ಚಿಂತಕರ ಚಾವಡಿ (Think Tank) ನಿರ್ಮಾಣ ಮಾಡಬಹುದು. ಅರ್ಥಪೂರ್ಣ ತರಬೇತಿಗಳಿಂದ ಒಂದು ಸಂಪನ್ಮೂಲ ತಂಡವನ್ನು ರಾಜ್ಯಮಟ್ಟದಲ್ಲಿ ಪೋಷಿಸಬೇಕು. ಇನ್ನು ಎಲ್ಲಾ ಶಾಲೆಗಳಲ್ಲಿ 30:1  ಶಿಕ್ಷಕರ ವಿದ್ಯಾರ್ಥಿಗಳ ಅನುಪಾತ ಇದೆ. 100 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ 7 ತರಗತಿಗಳಿಗೆ 4 ಶಿಕ್ಷಕರೆಂದರೆ ಹೇಗೆ? ತರಗತಿಗೆ ಒಬ್ಬ ಶಿಕ್ಷಕನಾದರೂ ಬೇಡವೇ? ಕೆಲವರು ತರಬೇತಿಗೆ ತೆರಳಿ, ಯಾರಾದರೂ ವೈದ್ಯಕೀಯ ರಜೆ ತೆಗೆದುಕೊಂಡರೆ ಏನು ಪರಸ್ಥಿತಿ? ಒಬ್ಬ ಶಿಕ್ಷಕ 7 ತರಗತಿಗಳನ್ನು ಹೇಗೆ ನಿಭಾಯಿಸುವುದು? ಇನ್ನು ಮುಖ್ಯ ಶಿಕ್ಷಕರು, ಅವರ ಕಲಿಕಾ ಅನುಭವವನ್ನು ಸದುಪಯೋಗ ಮಾಡಿಸಿಕೊಳ್ಳುವುದು ಬಿಟ್ಟು, ಇಲಾಖೆಯವರು ಅವರಿಗೆ ಹೊಸ ಹೊಸ ಬಿಲ್ಡಿಂಗ್ ಕಾರ್ಯಗಳು, ದಾಖಲೆ ನಿರ್ವಹಣೆಗಳು, ಸರ್ಕಾರದ ಯೋಜನೆಗಳ ನಿರ್ವಹಣೆ ನೀಡಿದರೆ ಹೇಗೆ? ಅವರ ಅನುಭವ ಹೀಗೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋದಂತಾಗಿ ಬಿಡುತ್ತದೆ. ಎಲ್ಲಾ ಒತ್ತಡಗಳ ನಡುವೆ ಎಳೆಯ ಕಂದಮ್ಮಗಳು ನಲುಗಿ ಹೊಗುತ್ತವೆ.
           ಇನ್ನು ಶಿಕ್ಷಕರ ಕಾರ್ಯ ಕ್ಷಮತೆಯ  ಬಗ್ಗೆ ಹೇಳುವುದಾದರೆ, 'ಪ್ರಥಮ್' ಎನ್ನುವ NGO ಸರ್ವೇ ಪ್ರಕಾರ, ನಿಷ್ಠೆಯಿಂದ ಕೆಲಸ ಮಾಡುವವರು ಕೇವಲ 53% ಮಾತ್ರ, ಇನ್ನುಳಿದವರು ದಾಖಲೆಗಳನ್ನು ಶಿಸ್ತಿನಿಂದ ನಿರ್ವಹಣೆ ಮಾಡಿ, ಕಲಿಕೆಯನ್ನು ಗಾಳಿಗೆ ತೂರಿ, ಹರಟೆ ಹೊಡೆದು ಕಾಲಹರಣ ಮಾಡುವವರಿಗೆ ಏನು ಹೇಳೋಣ?
          ಪಾಲಕರು ಏನು ಮಾಡುತ್ತಾರೆ? RTEನಲ್ಲಿ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸುವುದು ಅವರ ಆದ್ಯ ಕರ್ತವ್ಯ ಎಂದಿದೆ. ಕಳುಹಿಸದಿದ್ದರೆ? ಬಡತನ, ಸಾಮಾಜಿಕ ಅಸಮನತೆಯಂಥ ಈ ಸಮಾಜದಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ದೇಶದಲ್ಲಿ, ಪೋಷಕರು ದಂಡನೆಗೆ ಅರ್ಹರಲ್ಲ. ಆದರೂ ಮಕ್ಕಳ ಶಿಕ್ಷಣದ ನೈತಿಕತೆ ದೃಷ್ಟಿಕೋನದಿಂದ ಸರಿ ಅನಿಸದು. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದರೆ ಹೇಗೆ? ದೇಶದ ನಾಗರೀಕರಾಗಿ ಅವರವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿರದಿದ್ದರೆ ಹೇಗೆ?
          SDMC, ಜನಸಾಮಾನ್ಯರಿಗೆ ಶಾಲಾ ಶಿಕ್ಷಣದ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಪಾತ್ರವಿರದಿದ್ದರೆ ಯಶಸ್ಸು ಸಿಗದು ಎಂಬ ಕಾರಣಕ್ಕಾಗಿ ಸರ್ಕಾರ ಪ್ರತಿ ಶಾಲೆಗೆ ಒಂದು SDMC ಯನ್ನು ನೇಮಿಸಿದೆ. SDMC ಗಳಿಗೆ ಶಾಲಾ ಅಭಿವೃದ್ಧಿಗಾಗಿ ಬರುವ ಅನುದಾನ ಬಿಟ್ಟು ಬೇರೇನೂ ಕಣ್ಣಿಗೆ ಕಾಣುವುದಿಲ್ಲ. ಇವರು ಶಾಲೆಯ ಮುಖ್ಯ ಭೂಮಿಕೆಯಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕು.
         ಇಷ್ಟೆಲ್ಲಾ ಇದ್ದರೂ, ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದ ಸ್ಥಿತಿ ಉತ್ತಮ. ಯಾವುದೇ ಹೊಸ ಕಾರ್ಯಕ್ರಮಗಳನ್ನು ರಚಿಸುವಾಗ ಗ್ರಾಮೀಣ ಶಾಲೆಗಳ ಶಿಕ್ಷಕರನ್ನು ಸಮಿತಿಯಲ್ಲಿಟ್ಟುಕೊಂಡು, ಅದರ ಸಾಧ್ಯತೆ ಭಾದ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಯೋಜನೆ ರಚಿಸಬೇಕು. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕು. ಮುಗ್ಧ ಮಗುವಿನ ಕಣ್ಣಿನಲ್ಲಿ ಇಣುಕಿ ನೋಡಿದಾಗ, ನಿಮಗೆ ಭಗವಂತ ಕಾಣದೇ ಹೋದರೆ, ಮತ್ತೆಲ್ಲೂ ದೇವರು ಕಾಣುವುದಿಲ್ಲ. ಮಕ್ಕಳು ದೇವರ ಸಮಾನ. ಅವರ ಭವಿಷ್ಯದ ಜೊತೆ ಆಡುವುದು ಸಲ್ಲದು. ಯಾರನ್ನು ಮರೆತರೂ, ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ.  ನಿಮ್ಮ ಒಳ್ಳೆಯ ಕಾರ್ಯಗಳನ್ನು ನಿಮ್ಮ ಇಲಾಖೆಯವರು ಗುರುತಿಸದೇ ಹೋದರೂ, ಮನೆಯಲ್ಲಿರುವ, ಶಾಲೆಯಲ್ಲಿರುವ ನಿಮ್ಮ ಮಕ್ಕಳು ನಿಮ್ಮನ್ನು ವಾಚ್ ಮಾಡುತ್ತಿರುತ್ತಾರೆ. ನಿಮ್ಮ ವ್ಯಕ್ತಿತ್ವ ಅವರಿಗೆ ಸ್ಪೂರ್ಥಿಯಾಗಬೇಕು. ಅವರಿಗಾಗಿ ನೀವು ಹೀರೋ ಆಗಲೇಬೇಕು. ನನ್ನ ಅಪ್ಪಾಜಿ ಹೇಳುವ "ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ", ಈ ಸಮಯಕ್ಕೆ ಅರ್ಥಗರ್ಬಿತ ಮಾತು. "ನನ್ನ ಭವಿಷ್ಯವನ್ನು ರೂಪಿಸಿದವರಲ್ಲಿ ನನ್ನ ಶಿಕ್ಷಕರ ಮಹತ್ತರ ಪಾತ್ರ ಇದೆ" ಎಂದು ಹೇಳುವ ಹಲವಾರು ಸ್ನೇಹಿತರು ನನ್ನೊಂದಿಗಿದ್ದಾರೆ. ಅಂಥವರ ಭವಿಷ್ಯ ರೂಪಿಸುವಲ್ಲಿ ಶ್ರಮ ಪಡಿ. ಶಾಲೆಯಲ್ಲಿ ಪಾಠದಲ್ಲಿರುವುದನ್ನು ಯಥಾವತ್ತಾಗಿ ಹೇಳುವುದಕ್ಕಿಂತ, ಅನುಭವದ ಆಧಾರದ ಮೇಲೆ ಕಲಿಸಬೇಕು. ಮಕ್ಕಳಿಗೆ ಮುಕ್ತವಾದ ವಾತಾವರಣ ಕಲ್ಪಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಗುರು ಬ್ರಹ್ಮೋ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂಬ ದೊಡ್ಡವರ ಮಾತುಗಳು ಎಂದೆಂದಿಗೂ ಶಾಶ್ವತ. 
         ಈ ಕ್ಷೇತ್ರದಲ್ಲಿ ನನಗೆ ಯಾವುದೇ ಅನುಭವ ಇಲ್ಲದಿದ್ದರೂ, ತಾಳ್ಮೆಯಿಂದ ನನ್ನ ಬ್ಲಾಗ್ ಓದಿ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಬರೆದಿರುವ ಯಾವುದೇ ಅಭಿಪ್ರಾಯ ಅತಿಶಯೋಕ್ತಿ ಅನ್ನಿಸಿದರೆ ಕ್ಷಮೆ ಇರಲಿ. ಇಷ್ಟವಾದರೆ ತಿಳಿಸಿ. ಇಷ್ಟವಾಗದಿದ್ದರೂ ತಿಳಿಸಿ.

-- ದೇಸಾಯಿ ಸರ್ ಮಗ ಅರವಿಂದ್. 

Monday, January 12, 2015

ಸಂಕ್ರಾಂತಿ ಬಂತು : ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ

ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಟೇಬಲ್ ಮೇಲೆ ಹರವಿಕೊಂಡು, ಪೆನ್ನು ಹಿಡಿದು ಬ್ಲಾಗ್ ಬರೆಯಲು ಶುರು ಮಾಡಿದ್ದೇನೆ. ನಾನು ಚಿಕ್ಕವನಿದ್ದಾಗಿನ ನೆನಪು. ಸಂಕ್ರಾಂತಿ ಬಂತೆಂದರೆ, ಎಳ್ಳು ಸಕ್ಕರೆ ಅಥವಾ ಬೆಲ್ಲದ ಚೂರುಗಳನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿಕೊಂಡು, ನನ್ನ ಅಪ್ಪಾಜಿ ಹೇಳಿಕೊಟ್ಟ ವಾಕ್ಯ "ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ" ಎಂದು ಸರಿಸುಮಾರು ಎಲ್ಲರಿಗೂ ಶುಭಾಶಯ ಕೋರುತ್ತಾ ಊರೆಲ್ಲ ತಿರುಗಿ ಬಿಡುತ್ತಿದ್ದೆ. ಚಿಕ್ಕವರಾಗಿದ್ದಾಗ ಮುಗ್ಧತೆಯಿಂದ ಎಲ್ಲ ಮನೆಯನ್ನು ಭೇಟಿಯಾಗಿ ಎಳ್ಳು ಕೊಡುವುದು ಒಂದು ಸಂಭ್ರಮ.
       ಹಬ್ಬಗಳು ಬಂತೆಂದರೆ ನನಗಂತೂ ಫುಲ್ ಖುಷಿ. ಹಬ್ಬದ ದಿನದಂದು ಮದುವೆ ಮನೆಯ ವಾತಾವರಣ. ನನ್ನ ಅವ್ವನಿಗಂತೂ ಭರಪೂರ ಕೆಲಸ. ಪೂಜೆ ಆಗುವವರೆಗೂ ತಿನ್ನಲು ಏನೂ ಕೊಡುವುದಿಲ್ಲ ಎಂದು ನನ್ನವ್ವ ಹೇಳಿದಾಗ, ಹೊಟ್ಟೆ ಚುರುಗುಟ್ಟುತ್ತಾ ಹುಸಿ ಕೋಪದಿಂದ ಕಾಯುತ್ತಿದ್ದುದೇ ಸಂಭ್ರಮ. ಚಳಿಗಾಲದಲ್ಲಿ ಮೈಯಲ್ಲಾ ಬಿರುಕು ಬಿಟ್ಟು, ನಂತರ ಸಂಕ್ರಮಣ ಬಂದಾಗ, ಎಳ್ಳು ಎಣ್ಣೆಯ ಅಂಶವನ್ನು ಮೈಯಲ್ಲಿ ಬೆರೆಸುತ್ತದೆ ಎಂದು ವೈಜ್ಞಾನಿಕ ಟಿಪ್ಪಣೆ ಕೊಟ್ಟು, ಅಪ್ಪ ಸ್ವತಃ ತಾನೇ ನನ್ನನ್ನು ಸ್ನಾನ ಮಾಡಿಸುತ್ತಿದ್ದರು, ಅದೇ ಸಂಭ್ರಮ.
          ನನ್ನವ್ವ ಎಳ್ಳನ್ನು ಹಸನು ಮಾಡಿ, ಬಿಸಿಲಿಗೆ ಕಾಯಿಸಿ, ಅದರಲ್ಲಿ ಬೆಲ್ಲ ಬೆರೆಸಿ ಎಳ್ಳು ಹೋಳಿಗೆ ಮಾಡಿ, ತಿನ್ನಲು ಕೊಟ್ಟಾಗ ಅದಕ್ಕಿಂತ ಸಂಭ್ರಮ ಇನ್ನೊಂದಿಲ್ಲ. ನನ್ನ ಅಣ್ಣ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಸಂಕ್ರಮಣದ ಮೆರವಣಿಗೆಗೆ ನಾನೇ ರಾಜ. ಅಣ್ಣನಿಲ್ಲದೇ ಕಳೆದ ಎಲ್ಲಾ ಸಂಕ್ರಾಂತಿಗಳಲ್ಲೂ ಆತನ ಕೊರತೆ ಕಾಡುತ್ತಿರುತ್ತಿತ್ತು. ಆದರೆ ನನ್ನ ಅಪ್ಪಾಜಿ, ಅಪ್ಪನಾಗಿ ಅಗತ್ಯ ಬಿದ್ದಾಗ ಅಣ್ಣನಾಗಿ, ಸ್ನೇಹಿತನಾಗಿ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು.


     ನಾನು ಚಿಕ್ಕವನಾಗಿದ್ದಾಗಿನಿಂದ ಹಿಡಿದು, ಇಲ್ಲಿಯವರೆಗೆ ಹಲವಾರು ಬದಲಾವಣೆಗಳನ್ನು ನೋಡುತ್ತಾ ಬಂದಿದ್ದೇನೆ. ನನ್ನ ಅವ್ವ ಮನೆಯಂಗಳದಲ್ಲಿ ಒಂದು ದೊಡ್ಡ ಹಂಡೆ ಹಿಡಿಯುವಷ್ಟು ಜಾಗದಲ್ಲಿ ರಂಗೋಲಿ ಹಾಕುತ್ತಾಳೆ. ಬೆಂಗಳೂರಿನ ಹೆಣ್ಣುಮಕ್ಕಳು ಅಪಾರ್ಟಮೆಂಟ್ ನಲ್ಲಿ ರಂಗೋಲಿ ಹಾಕಲು ಜಾಗ ಹುಡುಕುತ್ತಿರುತ್ತಾರೆ. ನನ್ನವ್ವ ಎಳ್ಳು ಬೆಲ್ಲ ಸೇರಿಸಿ ಉಂಡೆ ಮಾಡಿ ಕೊಡುತ್ತಿದ್ದರೆ, ನನ್ನ ಅಕ್ಕ ಸುಜಾತಾ ಮನೆಯಿಂದಲೇ ಎಳ್ಳುಂಡೆ ಮಾಡಿಸಿ ಮಕ್ಕಳಿಗೆ ಕೊಡುತ್ತಾಳೆ, ಇದೂ ಒಂಥರಾ ಔಟ್ ಸೋರ್ಸಿಂಗ್. ಆಗ ಊರ ತುಂಬೆಲ್ಲಾ ಎಳ್ಳು ಹಂಚುತ್ತಿದ್ದೆವು, ಈಗ ಪಕ್ಕದ ಮನೆಯವರಿಗೂ ಕೊಡುವ ಪದ್ಧತಿ ಇಲ್ಲ. ಆಗ 'ಚರಿಗೆ ಚಲ್ಲು' ವಂಥಾ ಕಾರ್ಯಕ್ರಮಗಳನ್ನೂ ಆಚರಿಸಿದ್ದಿದೆ., ಈಗ ಯಾರ ಮನೆ, ಹೊಲಗಳಲ್ಲೂ ಇದು ಕಾಣ ಸಿಗುವುದಿಲ್ಲ. ಎಳ್ಳು ಬೆಲ್ಲವನ್ನು ಸಂಭಂಧಿಕರಿಗೆ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಕೊಟ್ಟು ಬರುವ ಪದ್ಧತಿಯುತ್ತು, ಈಗೆಲ್ಲ ಎಳ್ಳು ಬೆಲ್ಲ ಚಿತ್ರ ಬಿಡಿಸಿ ಮೊಬೈಲಿನಲ್ಲಿ ಕಳುಹಿಸುವ ಸಮಯ ಬಂದೊದಗಿದೆ. ಹಬ್ಬದ ದಿನದಂದು ಮೆಸೇಜಿಗೆ ಒಂದು ರೂಪಾಯಿ ಮಾಡಿದಾಗಿನಿಂದ ಮೆಸೇಜೂ ಕಡಿಮೆಯಾಗಿಬಿಟ್ಟಿದೆ. ಈಗೇನಿದ್ದರೂ ಫೆಸ್ ಬುಕ್ , ವಾಟ್ಸ್ ಆಪ್.
     ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಆಚರಣೆಗಳೂ ಬದಲಾಗಬೇಕು. ಹಾಗಂತ ಹೋಳಿಗೆ ಬದಲಾಗಿ ಫಿಜ್ಜಾ ಆಗಲಿ, ಪಾಯಸದ ಬದಲಾಗಿ ಕೂಲ್ ಡ್ರಿಂಕ್ಸ್ ಬರಬಾರದು. ಹಬ್ಬದ ಆಚರಣೆಯಲ್ಲಿ ಬದಲಾವಣೆ ಮಾಡಿದರೂ ಸಂಭ್ರಮಕ್ಕೆ ಚ್ಯುತಿ ಬರಬಾರದು. ಅಜ್ಜಿಯರು ಮೊಮ್ಮಕ್ಕಳಿಗೊಸ್ಕರ ವಾದರೂ ಆಚರಣೆಗಳನ್ನು ಆಚರಿಸಿ, ಅದರ ಮಹತ್ವ ಕಾಪಾಡಬೇಕು. ಬಹುಷಃ ಪೀಳಿಗೆಯಿಂದ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದೇ . ಹಿರಿಯರು ಈ ಹಬ್ಬಗಳನ್ನು ಯಾವುದೇ ಕಾರಣವಿಲ್ಲದೆ ಆಚರಣೆ ಮಾಡುವಂಥ ದಡ್ಡರಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಟ್ಟದಂತೂ ಇಲ್ಲ,.
        ಹಬ್ಬಗಳು ಬರೀ ರುಚಿಯಾದ ತಿಂಡಿ ತಿನ್ನುವ ನಾಲಿಗೆಗೆ ಸಂಭಂದಿಸಿದ ವಿಷಯ ಅಲ್ಲ, ಇದು ಮನಸ್ಸಿಗೆ ಸಂಭಂದಿಸಿದ ವಿಷಯವೂ ಹೌದು. ಮನಸ್ಸಿನ ಬದಲಾವಣೆಗಳಿಗೆ, ಪ್ರತಿಜ್ಞೆಗಳಿಗೆ ಒಳ್ಳೆ ದಿನ. ಸಂಕ್ರಾಂತಿಯಂತೂ ಹೇಳಿ ಮಾಡಿಸಿದ ದಿನ. ಈ ಸಂಕ್ರಾಂತಿಗೆ ಒಂದು ಪ್ರತಿಜ್ಞೆ ಮಾಡೋಣ. ಬೆಳಿಗ್ಗೆ ಎದ್ದು ಉಸಿರು ಒಳಗೆ ಎಳೆದುಕೊಳ್ಳುತ್ತಾ ನಾನು ಆರೋಗ್ಯದಿಂದ ಇದ್ದೇನೆ ಎಂದುಕೊಳ್ಳೋಣ. ಉಸಿರು ಹೊರಗೆ ಬಿಡುತ್ತಾ ಅನಾರೋಗ್ಯವೆಲ್ಲಾ ಹೊರಹಾಕುತ್ತಿದ್ದೇವೆ ಎಂದು ಕೊಳ್ಳೋಣ. ಎಳ್ಳು ಬೆಲ್ಲ ತಿಂದು ಇನ್ನೆಲ್ಲ ನಮಗೆ ಒಳ್ಳೆ ದಿನಗಳೇ, ಎಂದು ಕೊಳ್ಳೋಣ. ವ್ಯತಿಗತ ಮನಸ್ತಾಪಗಳಿಗೆ ಪೂರ್ಣ ವಿರಾಮ ಹೊಕೋಣ. ಭೂಲೋಕದಾಚೆಯ ಸ್ವರ್ಗದ ಬಾಗಿಲು ತೆರೆಯಲಿ ಬಿಡಲಿ, ನಮ್ಮೊಳಗೊಂದು ಅರಿವಿನ ಸ್ವರ್ಗದ ಬಾಗಿಲು ಇರುತ್ತದಲ್ಲ, ಅದರ ಬಾಗಿಲು ನಾವೇ ಖುದ್ದಾಗಿ ತೆರೆಯೋಣ. ಮಕರ ಜ್ಯೋತಿಯ ಹಂಗು ತೊರೆದು, ಮನದೊಳಗಿನ ಮನೆಯ ಬಾಗಿಲಲ್ಲಿ ಮಮತೆಯ ದೀಪ ಹಚ್ಚಿಡೋಣ. ಅದು ಬೆಳಗುವ ಪ್ರೀತಿಯ ಬೆಳಕಲ್ಲಿ ಕಾಣುವ ಜಗದಲ್ಲಿ ಸಣ್ಣತನಗಳಿಗೆ ಜಾಗವಿರದಿರಲಿ.
        ಮಕ್ಕಳೆಲ್ಲಾ ಊರಿಗೆ ಹೋದಾಗ, ಅಪ್ಪ ಅವ್ವಂದಿರು ಮಾಡಿ ಬಡಿಸುವ ಪ್ರೀತಿಯ ಊಟದಂತೆ, ಅಣ್ಣಂದಿರು ಪ್ರೀತಿಯಿಂದ ಮೊಟಕುವಂತೆ, ಮನಸ್ಸಿನಿಂದ ಮನಸ್ಸು ಬೆಸೆಯುವ, ಎದೆಯಿಂದ ಎದೆಗೆ ಹರಿಯುವ ಚೈತನ್ಯದ ಮಹಾಪೂರವಾಗಲಿ ಈ ಹಬ್ಬ ಸಂಕ್ರಾಂತಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಇಷ್ಟವಾದರೆ ತಿಳಿಸಿ, ಇಷ್ಟವಾಗದಿದ್ದರೂ ತಿಳಿಸಿ. ಅರವಿಂದರಾಜ್ ಬಿ ದೇಸಾಯಿ

Sunday, February 9, 2014

ಕುಮಾರ ಪರ್ವತ ಮತ್ತು ಬೆಟ್ಟದ ಮೇಲಿನ ಭಟ್ಟರ ಮನೆಗೆ ಒಂದು ಭೇಟಿ

ಪ್ರವಾಸ ಕಥನವೊಂದು ನನ್ನ ಬ್ಲಾಗಿನ ಕೈಚೀಲದೊಳಗೆ ಸೇರುತ್ತಿರುವುದು ಇದೇ ಮೊದಲು. ನನ್ನ ಆಪ್ತಸ್ನೇಹಿತ ಬಿಂದು ಒಂದೊಮ್ಮೆ ಕುಮಾರ ಪರ್ವತಕ್ಕೆ ಹೋಗೋಣವೆಂದು ಕಿಚ್ಚು ಹೊತ್ತಿಸಿದ್ದ. ಕೊಡಚಾದ್ರಿ ಬೆಟ್ಟ, ಕಳಾವರಿ ಬೆಟ್ಟ (ಸ್ಕಂದಗಿರಿ ಅಂತಲೂ ಕರೆಯುತ್ತಾರೆ), ನಂದಿ ಬೆಟ್ಟ (ಬೈಕಿನಲ್ಲಿ) ಟ್ರೆಕ್ಕಿಂಗ್ ಹೋಗಿ ಅನುಭವಿದ್ದ ನನಗೆ, ಇದೇನು ಮಹಾ ಹೋಗಿ ಬಂದರಾಯಿತೆಂದು ಕೊಂಡು ಹೋಗಿ ಬರಲು ಸಿದ್ದನಾದೆ. ಆದರೆ ಹೋಗಿ ಬಂದ ಮೇಲೆಯೇ ತಿಳಿಯಿತು, ಕುಮಾರ ಪರ್ವತವು ದಕ್ಷಿಣ ಭಾರತದಲ್ಲಿ ಅತ್ಯಂತ ಕ್ಲಿಷ್ಟಕರವಾದ, ಕಷ್ಟಕರವಾದ ಟ್ರೆಕ್ಕಿಂಗ್ ಜಾಡು ಇದೆಯೆಂದು. 
               ನಮ್ಮದು 14 ಜನರ ತಂಡ, ಇದರಲ್ಲಿ ಹದ್ದುಗಳಂತೆ ತುಂಬಾ ವೇಗವಾಗಿ ಚಾರಣ (ಟ್ರೆಕ್ಕಿಂಗ್ ಗೆ ಕನ್ನಡದಲ್ಲಿ ಹೀಗೆನ್ನುತ್ತಾರೆ) ಮಾಡುವವರಿದ್ದರು, ಪಾರಿವಾಳಗಳಂತೆ ವೇಗವಾಗಿ ಹೋಗುವವರಿದ್ದರು, ನಿಧಾನವಾಗಿ ನಡೆದರೂ ಗುರಿ ಮುಟ್ಟಲೇಬೇಕೆಂಬ ಛಲಗಾರರಿದ್ದರು, ಆಮೆಗತಿಯಲ್ಲಿ ನಡೆದು ನಮಗೂ ಗುರಿಗೂ ಸಂಬಂಧವಿಲ್ಲದಂತಿದ್ದವರು ಕೂಡ ಕೆಲವರು.  ಅಂತು ಎಲ್ಲರೂ ಸೇರಿ ಲೆಕ್ಕಾಚಾರವೆಲ್ಲ ಬಿಟ್ಟು ಹೊಸ ವಿಚಾರ ಅರಸುತ್ತ, ಹೊಸ ಅನುಭವಕ್ಕೊಸ್ಕರ, TT ಎಂಬ ಹುಚ್ಚು ಕುದುರೆಯನ್ನೇರಿ ಹೊರೆಟೆವು ಕುಕ್ಕೆ ಸುಬ್ರಮಣ್ಯನ ಸನ್ನಿಧಾನಕ್ಕೆ. 
         ಬೆಳಿಗ್ಗೆ 6 ಘಂಟೆಗೆ ಕುಕ್ಕೆ ಸುಬ್ರಮಣ್ಯನಿಂದ ಬೆಟ್ಟ ಹತ್ತಲು ಶಕ್ತಿಯ ಬೇಡಿಕೆಯನ್ನಿಟ್ಟು ಪುಷ್ಪಗಿರಿ(KP ಗೆ ಇರುವ ಇನ್ನೊಂದು ಹೆಸರು) ಯನ್ನು ಹತ್ತಲು ಸನ್ನದ್ಧರಾದೆವು ಅಲೆಮಾರಿಗಳಂತೆ, ಎರಡು ದಿನ ನಮಗೂ ಹೊರ ಜಗತ್ತಿಗೂ ಸಂಬಂದ ಇಲ್ಲದಂತೆ. 13 km ಕ್ರಮಿಸಬೇಕಾದದ್ದು ನಮ್ಮ ಮುಂದಿದ್ದ ಚಾಲೆಂಜ್(ಒಟ್ಟಾರೆ 26km). 6km ನಡೆದರೆ ಬರುವುದೇ ಭಟ್ಟರ ಮನೆ, ಅಲ್ಲಿಂದ 4km ಕಲ್ಲು ಮಂಟಪ, ಮುಂದೆ 3km ನಡೆದರೆ ಬರುವುದೇ ಕೆಪಿ ಯ ತುತ್ತ ತುದಿ. 
            ನಮ್ಮ ಚಾರಣ ಶುರು. ಕೆಳತುದಿಯಿಂದ ಮಂದ ಬೆಳಕಿನಲ್ಲಿ ತುಂಬಾ ಹುಮ್ಮಸ್ಸಿನಿಂದ   ದಟ್ಟವಾದ ಅರಣ್ಯ ಪ್ರದೇಶದಲ್ಲಿ ದಾರಿಗಳನ್ನು ತಡಕಾಡುತ್ತಾ, ನಡೆದಿದ್ದೇ ಹಾದಿ ಎಂಬಂತೆ ನಿಸರ್ಗದ ಮಗುವಾಗುತ್ತಾ 1km ದಾರಿ ಸವೆಯುವುದಕ್ಕೆ ತೆಗೆದುಕೊಂಡಿದ್ದು 1 ಘಂಟೆ. ಕೊಂಚ ಚಳಿಯಾಗುತ್ತಿದ್ದ ಕಾರಣ ಸೂರ್ಯನ ಆಗಮನವನ್ನು ನಿರೀಕ್ಷಿಸುತ್ತಿದ್ದ ನಮಗೆ  8ರ ಹೊತ್ತಿಗೆ ಬಂದ. ಸೂರ್ಯನ ಕಿರಣಗಳು ದಟ್ಟವಾದ ಅರಣ್ಯದ ಮರಗಳ ಎಲೆಗಳಿಂದ ಯಾರನ್ನೋ ತಪ್ಪಿಸಿಕೊಂಡು ಬಂದು ನಮ್ಮನ್ನು  ಚುಂಬಿಸುತ್ತಿದ್ದವು.  ತುಂಬು ಬಿಸಿಲು ಅನುಭವಿಸಬೇಕೆನ್ನುವವರ ಕರೆಗೆ ತಥಾಸ್ತು  ಎಂದಿದ್ದ ದೇವರು, ಅಮೇಲೆ ನಾವು ಅನುಭವಿಸುತ್ತಿದ್ದುದೆಲ್ಲ ತುಂಬು ಬಿಸಿಲು, ಒಣ ಪರಿಸರ, ಕಡಿದಾದ ದುರ್ಗಮವಾದ ಹಾದಿ, 45 ರಿಂದ 60 ಡಿಗ್ರಿ ಏರುದಾರಿಗಳು, "ಏನೇ ಆಗಲಿ ಮುಂದೆ ಸಾಗು ನೀ" ಎಂಬ ಸುದೀಪ್ ಚಿತ್ರದ ಹಾಡು ನಮ್ಮಲ್ಲಿರುವ ಹುಮ್ಮಸ್ಸನ್ನು ಜಾಗೃತಗೊಳಿಸಿ ಮುನ್ನಡೆಸುತ್ತಲೇ ಇತ್ತು. 
           ಅಲ್ಲಿ ಇಲ್ಲಿ ವಿಶ್ರಾಂತಿ ಪಡೆದು ಸವೆಸಿದ್ದಾಯಿತು ಅರ್ಧ ದಾರಿ. ಭಟ್ಟರ ಮನೆಯ ನೆನಪಾಗಿದ್ದು ಆಗಲೇ. ಇನ್ನೂ ಎಷ್ಟು ದೂರ ಇದೆ ಭಟ್ಟರ ಮನೆ? ಎಂಬ ನಮ್ಮ ಪ್ರಶ್ನೆಗೆ, ಇತರೆ ಟ್ರೆಕ್ಕರ್ ಗಳಿಂದ ಇನ್ನು ಸ್ವಲ್ಪ ದೂರಾನೇ ಎಂಬ ಉತ್ತರ ಮುದ ನೀಡುತ್ತಿತ್ತು. ನಡೆದು ನಡೆದೂ ಭಟ್ಟರ ಮನೆ ಬಾರದಿದ್ದಾಗ ಉತ್ತರ ನೀಡಿದ ಚಾರಣಿಗರನ್ನು ಬೈದು ಪಡುವ ವಿಕೃತ ಸಂತೋಷಕ್ಕೆ, ದಣಿವಾರಿಸುವ ಶಕ್ತಿಯೂ ಇದೆ ಅಂತ ನನಗೆ ಆವತ್ತೇ ಗೊತ್ತಾಗಿದ್ದು. ಅಂತೂ ಇಂತೂ ಬಂತು ಭಟ್ಟರ ಮನೆ. ಕುಮಾರಪರ್ವತಕ್ಕೆ ಪುಷ್ಪಗಿರಿಯೆಂಬ ಇನ್ನೊಂದು ಹೆಸರಿದೆಯೆಂದು ಕೆಲವರಿಗೆ ಗೊತ್ತಿಲ್ಲದಿದ್ದರೂ ಭಟ್ಟರ ಮನೆಯ ಬಗ್ಗೆ ಮಾತ್ರ ಗೊತ್ತಿರುತ್ತದೆ. 
           ಯಾರೀ ಭಟ್ಟರು? KP ಗೆ  ಹೋಗುವ ಚಾರಣಿಗರಿಗೆ ಆಪದ್ಬಾಂಧವರು ಮತ್ತು ಅನ್ನದಾತರೂ ಹೌದು. ಇವರೊಬ್ಬ ಪರಿಸರವಾದಿ. ಬೆಟ್ಟದ ಮೇಲೆ ಅಡಿಕೆ ತೋಟ, ಹೈನುಗಾರಿಕೆ ನಡೆಸುತ್ತಿರುವ ತುಂಬು ಹೃದಯದ ಜೀವ. ನನಗೆ ಇವರನ್ನು ನೋಡಿದರೆ, ಶಿವರಾಮ ಕಾರಂತರ 'ಬೆಟ್ಟದ ಜೀವ' ಕಾದಂಬರಿಯ ನಾಯಕರಾದ ಕಾಟುಮೂಲೆಯ ನಿರ್ಮಾತೃ ಗೋಪಾಲಭಟ್ಟರು ನೆನಪಾಗುತ್ತಾರೆ. ವಿಶ್ರಾಂತ ಮತ್ತು ಆದರ್ಶ ಜೀವನ. ಹಸಿದು ಬಂದವರಿಗೆ, ಇವರು ಮಾಡುವ ಮಾಮೂಲಿ ಅನ್ನ ಸಾಂಬಾರ್ ಮೃಷ್ಟಾನ್ನದಂತೆಯೂ ಮಜ್ಜಿಗೆ ಅಮೃತದಂತೆಯೂ ಅನಿಸಿದರೆ ಅತಿಶಯೋಕ್ತಿ ಅಲ್ಲ.
             ಅಲ್ಲಿಂದ ಶೇಷ ಪರ್ವತ. ಕುಮಾರ ಪರ್ವತಕ್ಕೆ ಇಬ್ಬರು ತಮ್ಮಂದಿರಿದ್ದಾರೆ, ಅವರೇ ಶೇಷ ಪರ್ವತ ಮತ್ತು ಸಿದ್ದ ಪರ್ವತ. ಎರಡರಲ್ಲಿ ಶೇಷ ಪರ್ವತ ಮಾತ್ರ ತುಂಬಾ ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿರುತ್ತಾನೆ. ಮನಸ್ಸಿಗೆ ಮುದ ನೀಡುವ ರುದ್ರ ರಮಣೀಯ ಸ್ಥಳ. ನೀವು ಅಚಲ ನಿರ್ದಾರಗಳೇನಾದರೂ ತೆಗೆದು ಕೊಳ್ಳಬೇಕಿದ್ದರೆ, ಶೇಷ ಪರ್ವತವನ್ನು ಸ್ಪೂರ್ತಿಯಾಗಿ ಇಟ್ಟುಕೊಳ್ಳಿ, ಅಷ್ಟೊಂದು ನಿಶ್ಚಲ ಹೆಬ್ಬಂಡೆ.  
         ಅಲ್ಲಿಂದ, ಒಣ ಹುಲ್ಲಿನ ನಡುವೆ, ಭಾರವಾದ ಹೆಜ್ಜೆಗಳನ್ನಿಡುತ್ತಾ ಏರುಪೇರಾದ ದಾರಿಗಳನ್ನು ದಾಟುತ್ತಾ ಬಂದು ತಲುಪಿದ್ದೇ ಕಲ್ಲು ಮಂಟಪಕ್ಕೆ. ಭಟ್ಟರ ಮನೆ ಬಿಟ್ಟರೆ ನಿಮಗೆ ನೀರು ಸಿಗುವುದೇ ಈ ಸ್ಥಳದಲ್ಲಿ. ಮೊದಲೆಲ್ಲಾ ಇಲ್ಲಿ ಕಾಡುಪ್ರಾಣಿಗಳು ಅಡ್ಡಾಡುತ್ತಿದ್ದವಂತೆ, ಪಾಪಿ ಮನುಷ್ಯ ಕಾಲಿಟ್ಟ ಮೇಲೆ ಪ್ರಾಣಿ, ಪಕ್ಷಿಗಳಾದರೂ ಹೇಗೆ ಉಳಿದಾವು..? ಕಲ್ಲು ಮಂಟಪಕ್ಕೆ ನಮ್ಮೆಲ್ಲಾ ಶಕ್ತಿ ಕುಂದಿ ಹೋಗಿತ್ತು. ಆದರೆ ನಮ್ಮ ತಂಡದಲ್ಲಿದ್ದ ಹದ್ದುಗಳು, ಪಾರಿವಾಳಗಳು ಹಾರಿಹೋಗಿದ್ದವು KP ಯ ತುತ್ತ ತುದಿಯ ಕಡೆಗೆ. ಈ ದಾರಿ ಸಾಮಾನ್ಯವಾದುದೇನಲ್ಲ. 60 ರಿಂದ 70 ಡಿಗ್ರಿ ವಾಲಿರೋ ಏರು ಕಲ್ಲು ಮಿಶ್ರಿತ ಹಾದಿಗಳು, ದುರ್ಗಮ, ಕಡಿದಾದ ದಾರಿ. ಒಂದೊಂದು ಬಂಡೆಗಳಂತೂ 80 ಡಿಗ್ರಿ ಏರಿರುತ್ತವೆ. ಇದನ್ನೆಲ್ಲಾ ನೋಡಿ, ಆವಾಗವಾಗ ಅನ್ನಿಸುತ್ತಿತ್ತು 'ಇವೆಲ್ಲಾ ಬೇಕಿತ್ತಾ?'ಅಂತ. ಆದರೂ ದಕ್ಷಿಣ ಭಾರತದ ಅಂತ್ಯಂತ ಕ್ಲಿಷ್ಟಕರವಾದ ಚಾರಣವನ್ನು ಮಾಡಲೇಬೇಕೆಂಬ, ತುತ್ತತುದಿಯನ್ನು ಮುಟ್ಟಲೇಬೇಕೆಂಬ ಭಂಡತನ ನಮ್ಮ ಬೆನ್ನು ತಟ್ಟುತ್ತಲೇ ಇತ್ತು.
          ನಮ್ಮ ಶಕ್ತಿ ತಲೆಯಿಂದ ಪಾದದವರೆಗೂ ಝೀರೋ ಆಗಿತ್ತು . ಇನ್ನೇನು ಮುಂದೆ ಹೋಗಕ್ಕಾಗಲ್ಲಾ ಎಂದುಕೊಳ್ಳುತ್ತಿರುವಾಗ ಹೊಳೆಯಿತು ಒಂದು ಉಪಾಯ. ಮುಂದೆ ಬಾಗಿ ತಲೆ ಬಗ್ಗಿಸಿ ಕೈಯಲ್ಲಿ ಒಂದು ಬೆತ್ತ ಹಿಡಿದು ಬೆಟ್ಟ ಹತ್ತಿದರೆ, ಎಷ್ಟು ದೂರ ಬೇಕಾದರೂ ಕ್ರಮಿಸಬಹುದೆಂದು. ನಮ್ಮೆಲ್ಲ ಸೊಕ್ಕಡಗಿದ ಮೇಲೆ, ಸಾಲು ಸಾಲು ಬೆಟ್ಟಗಳನ್ನು ಮೆಟ್ಟಿ ನಿಂತ ಮೇಲೆ ಬಂತು kpಯ ತುತ್ತತುದಿ. ನಿಮಗಿದು ಜಾಸ್ತಿ ಅನಿಸಿದರೂ, ನಮಗಾಗಿದ್ದು ಮಾತ್ರ ಜಗತ್ತು ಗೆದ್ದ ಅನುಭವ. ಎಷ್ಟೇ ಕಷ್ಟ ಇದ್ದರೂ, ದೃತಿಗೆಡದೇ ಕುಮಾರ ಪರ್ವತ ಹತ್ತಿದ ಕುಮಾರರು ನಾವು. ಆಗಿರುವ ಮಾನಸಿಕ ಸಂತೋಷಕ್ಕೆ, ದೈಹಿಕ ನೋವಿಗೆ ಮಲಗುವುದೇ ಮದ್ದು ಎಂದು ತಿಳಿದು, ತಂದಿದ್ದ ಚಪಾತಿ ತಿಂದು, ಫೈರ್ ಕ್ಯಾಂಪ್ ಹಾಕದೇ, ಬೆಟ್ಟದ ಮೇಲೊಂದು ಮನೆಯ ಮಾಡಿ ಎಂಬ ಕವಿವಾಣಿಯಂತೆ, ನಾವೂ ತಾತ್ಕಾಲಿಕ ಮನೆಯೊಂದ ನಿರ್ಮಿಸಿ, ಮಲಗುವ ಚೀಲ (sleeping bag)ದಲ್ಲಿ ಹೊಕ್ಕಿದ್ದೇ ಸುಮಧುರ ಕ್ಷಣ, ಶುಭರಾತ್ರಿ.
ಬೆಳಗಾಯಿತು, ಸೂರ್ಯೋದಯ ನೋಡುವ ಸಮಯ. ಬೆಟ್ಟದ ಮೇಲಿನಿಂದ, ವಿಶೇಷವಾಗಿ 5712 ಅಡಿಗಳಷ್ಟು ಎತ್ತರದಿಂದ ನೋಡುವುದೇ ಒಂದು ಅಂದ ಒಂದು ಚಂದ. ಮೋಡದ ಮರೆಯಲ್ಲಿ ನಿಂತು ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಸೂರ್ಯ, ಬೆಳಿಗ್ಗೆ 7ರ ಸುಮಾರಿಗೆ ದರ್ಶನ ಭಾಗ್ಯ ಕೊಟ್ಟ. ಕೆಳಗಡೆ ಬಿದ್ದರೆ ದೇಹ ದೊರಕದಂಥ ದಟ್ಟಾರಣ್ಯ, ಎದುರಿಗೆ ಸೂರ್ಯ, ಸೂಯನ ಕೆಳಗೆ ಸಮುದ್ರದಂತೆ ಕೊನೆಯೇ ಇರದ ಬೆಟ್ಟಗಳ ಸಾಲು. ಪಕೃತಿ ಎಂಬ ಹುಡುಗಿಗೆ ಕುಂಕುಮ ಬೊಟ್ಟು ಇಟ್ಟಂತಾಗಿಬಿಟ್ಟಿತ್ತು ಈ ಸೂರ್ಯನ ಆಗಮನ. ನಮ್ಮ ಸಮೀಪದಲ್ಲಿ ತೇಲುತ್ತಿರುವ ಮೋಡಗಳು, ನಮ್ಮನ್ನೇ ನಾವು ಕಳೆದುಕೊಂಡ ಅನುಭವ. ಸೂರ್ಯೋದಯ ನೋಡಲಿಕ್ಕೆ ಅಲ್ಲಿಗೆ ಹೋಗಬೇಕಾ? ಎಂಬ ನನ್ನ ಸ್ನೇಹಿತ ಕೇಳಿದ ಪ್ರಶ್ನೆಗೆ ತಾತ್ವಿಕ ಮೆರುಗು ನೀಡಿತ್ತು ಈ ನಿಸರ್ಗ. ಕವಿ ಹೃದಯ ಜಾಗೃತವಾಗುವುದೇ ಎಂಥ ಸ್ಥಳದಲ್ಲಿ. ಅದರ ಸೊಬಗನ್ನು ಎಷ್ಟು ಬಾಚಿ ತಬ್ಬಿ ಹಿಡಿದರೂ, ತೃಪ್ತಿ ಸಿಗದು. ಪ್ರಕೃತಿಯ ಪಂಚಭೂತಗಳೆದುರು, ಮನುಷ್ಯ ಎಷ್ಟೇ ದೊಡ್ಡವನಾದರೂ, ಚಿಕ್ಕವನು. 
            ಜನಶ್ರಾವಂತಿಯಲ್ಲಿ ಮತ್ತೆ ಬೇರೆಯುವುದಕ್ಕೆ, ನಿಸರ್ಗದ ಮಡಿಲಿನಿಂದ ಎದ್ದು, ಟೆಂಟ್ಗಳನ್ನು ಕೊಂಕುಳಲ್ಲಿ ಸಿಕ್ಕಿಸಿಕೊಂಡು ಬರಬರನೇ ತುಂಬಾ ಜಾಗೃತವಾಗಿ ನಡೆಯತೊಡಗಿದೆವು. ಹತ್ತಿದ್ದಕ್ಕಿಂತ ಕಡಿಮೆ ಸಮಯ ತೆಗೆದುಕೊಂಡು ಕೆಳ ತುದಿ ಸೇರಿಕೊಂಡೆವು. ಸೋಮವಾರಪೇಟೆ ಕಡೆಯಿಂದಲೂ ಇಳಿಯಬಹುದು. 
             ಈ ಟ್ರೆಕ್ಕಿಂಗ್, ನಮ್ಮ ಶಕ್ತಿಯೇನು? ಸಾಮರ್ಥ್ಯವೇನು? ನಿಸರ್ಗದ ಮುಂದೆ ನಾವೆಷ್ಟು ಚಿಕ್ಕವರು? ನಮ್ಮ ಅಹಂ? ಈ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಮತ್ತೂ ಆ ಎಲ್ಲಾ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ದೊರೆತಿದ್ದೂ ಸುಳ್ಳಲ್ಲ. ನಿಮ್ಮ ನಿಮ್ಮ ದೇಹ ದಂಡಿಸುವುದಕ್ಕೂ ಬೇಕಾದರೂ kp ಹತ್ತಿ ಇಳಿಯಬಹುದು. ಹಳೆಯ ಗಾದೆ ಮಾತಿದೆ "ರೊಕ್ಕ ಇದ್ದರೆ ಗೋಕರ್ಣಕ್ಕೆ ಹೋಗು, ಸೊಕ್ಕಿದ್ದರೆ ಯಾಣಕ್ಕೆ ಹೋಗು" ಅಂತ. ಸೊಕ್ಕಿದ್ದರೆ ಯಾಣಕ್ಕಲ್ಲ (ಬಸ್ ವ್ಯವಸ್ಥೆ ನಿರ್ಮಾಣ ಆಗಿರುವುದರಿಂದ, ಯಾಣದ ಬುಡದವರೆಗೂ ಹೋಗಿ ಬರಬಹುದು) ಕುಮಾರ ಪರ್ವತ ಹತ್ತಿ ಬನ್ನಿ.
         ಚಾರಣಿಗರಿಗೆ ಸ್ವರ್ಗ ಸುಖ ನಿದುವಂಥ ಸ್ಥಳ.  "hell to be there but heaven to see" ಆ ಮಾತು ಸುಳ್ಳಲ್ಲ ಬಿಡ್ರಿ.  ನಮ್ಮಂಥ ಅಮಾವಾಸ್ಯೆ ಹುಣ್ಣಿಮೆಗೆ ಚಾರಣ ಮಾಡುವವರಿಗೆ ಕಷ್ಟಸಾದ್ಯ. ನಾನು ಇನ್ನೊಮ್ಮೆ ಅಲ್ಲಿಗೆ ಹೋಗುವುದು ಮಾತ್ರ ತಿರುಕನ ಕನಸು ಎಂದು ಹೇಳುತ್ತಾ, ಇಷ್ಟವಾದರೆ ಶಭಾಷ್ ಅನ್ನಿ. ಇಷ್ಟ ಆಗ್ಲಿಲ್ಲ ಅಂದ್ರೆ ಕೋಳಿ ಮೊಟ್ಟೆ ತಗೊಂಡು ಹೊಡಿರಿ ಪರವಾಗಿಲ್ಲ, ನಿಮ್ಮ ಪ್ರತಿಕ್ರಿಯೆ ಮಾತ್ರ ಯಾವತ್ತೂ ಇರಲಿ. 

ತಂಡ: ಬಿಂದು, ಚೇತನ್, ನಿತಿನ್, ಅಬ್ದುಲ್, ಸಚಿನ್, ಶುಕ್ಲಾ, ನಿಧಿನ್, ವಿಶ್ವ, ಬಸವ, ಹರೀಶ, ಮಿಲ್ಲಾ, ಕಾರ್ತಿಕ್, ರಾಕೇಶ್, ನಾನು(ಅರವಿಂದ). 

ಮಾಹಿತಿ:
1. ಭಟ್ಟರ ಮನೆ ಊಟ - 90 ರೂ 
    ಮೊಬೈಲ್ ನಂಬರ್ : 9448647947 (ಹೋಗುವ ಮುನ್ನಾ ದಿನ ಅವರಿಗೆ ತಿಳಿಸಿ)
2. Forest Dept entry fees: 200/- per head..
3. ನೀರು ಸಿಗುವ ಸ್ಥಳ : 
                                ಒಂದು ಫಾಲ್ಸ್ ಹತ್ತಿರ (after 3km)
                                ಭಟ್ಟರ ಮನೆ 
                                ಕಲ್ಲು ಮಂಟಪ 
                                after forest end
4. ಮಾರ್ಗ: ಬೆಂಗಳೂರು > ಚನ್ನರಾಯಪಟ್ಟಣ > ಸಕಲೇಶಪುರ > ಶಿರಾಡಿ ಘಾಟ್ > ಕುಕ್ಕೆ 
5. ದೂರ: 
    ಬೆಂಗಳೂರು > ಕುಕ್ಕೆ : 282km
    ಕುಕ್ಕೆ to kp ಕೆಳತುದಿ : 1.2km
    kp ಕೆಳತುದಿ ಇಂದ ತುತ್ತತುದಿ: 13km