A r v i n d r a j   D e s a i

Saturday, July 2, 2011

ಬೆಂಗಳೂರು: ಭಾವನಾತ್ಮಕ ವಿದಾಯ

               ಒಂದು ಸುಂದರ ಮುತ್ಸಂಜೆಗೆ ಈ ಬರಹ ಸಾಕ್ಷಿಯಾಗುತ್ತದೆಂದು ನಾನಂದುಕೊಂಡಿರಲಿಲ್ಲ. ಇಸ್ರೋ ಲೇಔಟಿನ ಎರಡನೇ ಮಹಡಿಯ ಮೇಲ್ಛಾವಣಿಯ ಮೇಲೆ ಕುರ್ಚಿ ಹಾಕ್ಕೊಂಡು ಕುಳಿತಿದ್ದೆ. ಕಪ್ಪು ಮೋಡದ ನರ್ತನ, ಮಿಂಚು ಗುಡುಗುಗಳ ಆರ್ಭಟ, ಧೂಳು ಮತ್ತು ಹಿಮತುಕದಿಯ ಆಕ್ಸಿಡೆಂಟ್, ಮುಂಗಾರು ಮಳೆಯಾಗಿ ಪರಿವರ್ತನೆಗೊಂಡು ಭೂಮಿಯ ಮಡಿಲು ಸೇರಿತು. ಅದೇನೋ "ಪ್ರೀತಿ ಮಧುರ, ತ್ಯಾಗ ಅಮರ" ಮುಂಗಾರು ಮಳೆಯ ಮಾತು ನೆನಪಾಗಿ, ಮಳೆಯಲ್ಲಿಯೇ ನೆನೆಯುತ್ತಾ ಕುಳಿತುಬಿಟ್ಟೆ. ಮನಸ್ಸಿನಲ್ಲಿ ಏನೋ ದುಗುಡ ದುಮ್ಮಾನ. ಯಾರನ್ನೋ ಕಳೆದುಕೊಂಡ ಭಾವನೆ. ಚಿತ್ರ ವಿಚಿತ್ರ ನೆನಪುಗಳ ಲಹರಿ. ಅಣ್ಣಾವ್ರ ಹಾಡುಗಳ ಮೆಲಕು, ಆ ಚಳಿಗೆ ಮಳೆಗೆ ಟೀ ಹೀರೋಣವೆನ್ನಿಸಿತು, ಅಷ್ಟರಲ್ಲೇ ನನ್ನ ಆತ್ಮೀಯ ಗೆಳೆಯ ವಿಜಯ ಟೀಯೊಂದಿಗೆ ಪ್ರತ್ಯಕ್ಷ. ಕಳೆದುಕೊಂಡಿದ್ದೆಲ್ಲಾ ಸಿಕ್ಕಂತಾದ ಭಾವನೆ. 
ನೆನಪಿನಂಗಳದಲ್ಲಿ ರಂಗೋಲಿಯನ್ನು ಹಾಕತೊಡಗಿದೆನು. ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟಾಗಿನಿಂದ ಹಿಡಿದು ಎಲ್ಲಿಯತನಕ:-


"ಸವಿ ಸವಿ ನೆನಪು, ಸಾವಿರ ನೆನಪು, ಸಾವಿರ ಕಾಲಕು ಸವೆಯದ ನೆನಪು". 

ನಾನು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅದು ಪರವೂರು. ಈಗದು ತವರೂರಿಂತಾಗಿಬಿಟ್ಟಿದೆ. ಬೆಂಗಳೂರು ಬದುಕು ಕಲಿಸಿದೆ. ಸ್ಟೈಲ್, ಸ್ಮೈಲ್ ಕಲಿಸಿದೆ. ಆತ್ಮೀಯ ಗೆಳೆಯ, ಗೆಳತಿಯರನ್ನು ಪರಿಚಯ ಮಾಡಿಸಿದೆ. ಸೋಲು, ಗೆಲುವು ಸಹಿತ. ಮತ್ತೊಂದು ಸಾರಿ ಬೆಂಗಳೂರಿಗೆ ಬಂದಾಗ ಈ ಊರು ನನ್ನನ್ನು ತನ್ನ ಮೊಮ್ಮಗನೆಂಬುದನ್ನೇ ಮರೆತು ಬೇರೆಯವರಂತೆ ನಡೆಸಿಕೊಂಡುಬಿಡುತ್ತದೇನೋ ಎಂಬ ಭಯ.

ನಾನು ಎಲ್ಲಿಗೆ ಬಂದು ಏನು ಸಾಧಿಸಿದೆ? ಅಂಕಗಳು ನನ್ನ ಸಾಧನಾ ಮಾಪನವಾ? ಎಂಥ ನೂರೆಂಟು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹೊರಳಾಡಿದ್ದು ಸತ್ಯ. ಜ್ಞಾನದ ಹಸಿವು ಇನ್ನೂ ಆರಿಲ್ಲ. ಆದರೂ ಪದವೀಧರ.

ನಾನು ನನ್ನ ಹುಟ್ಟಿದೂರಿಗೆ ಬರುವಾಗ ಕೊನೆಯ ಬಾರಿ ಮತ್ತೆ ಸಿಗೋಣವೆಂದು ಹೇಳಲು ಸರದಾರ ಪಟೇಲ್ ಹಾಸ್ಟೆಲಿಗೆ ಹೋದಾಗ ಎಲ್ಲ ಜೂನಿಯರ್ಸ್ ವಿದಾಯ ಹೇಳಿದ್ದು ಮರೆಯಲಾಗದ ಕ್ಷಣ. ಮತ್ತೊಂದು ಸಂಗತಿ, ನನ್ನನ್ನು ಬಸ್ ನಿಲ್ದಾಣಕ್ಕೆ ಬಿಡಲೆಂದು ಬಂದ ನನ್ನ ಸ್ನೇಹಿತರಿಗೆ ಯಾವ ರೀತಿ ಚಿರರುಣಿಯಾಗಿರಲಿ. ಬಸ್ ನಿಲ್ದಾಣಕ್ಕೆ ತಲುಪಲು ಮುಂಚೆ ಬಹಳ ರೋಚಕ ಕ್ಷಣಗಳನ್ನು ಬೈಕಿನಲ್ಲ ಕಳೆದು ತಲುಪಿದಾಗ, ಕೊನೆಯ ಬಾರಿಗೆ ಆ ದಿನದ ಟೀ ಕರುಳಿನ  ಆಳಕ್ಕೆ ಇಳಿದು ನಿರಾಳ ಎನಿಸಿತು. ಬಸ್ ಹೊರಟು ನಿಂತಾಗ, ಯಾವುದೋ ಭಾರ ಮನಸ್ಸಿನ ಮೇಲೆ ಬಿದ್ದಂತಾಯಿತು. ಮತ್ತೆ ಮತ್ತೆ ಭೇಟಿಯಾಗಲೇಬೇಕೆಂಬ ಆಣೆ ಪ್ರಮಾಣದೊಂದಿಗೆ ನನ್ನನ್ನು ಅಲ್ಲಿಂದ ಬೀಳ್ಕೊಡಲಾಯಿತು. ಭಾವನಾಜೀವಿಯಾದ ನಾನು, ನಿಮ್ಮ ಸ್ನೇಹದ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ.
ಈ ಎಲ್ಲಾ ಭಾವನಾತ್ಮಕ ವಿದಾಯವನ್ನು ಬೆಂಗಳೂರಿಗೆ ಅರ್ಪಿಸುವಾಗ ಕಣ್ ಹನಿಯು ಭೂಮಡಿಲು ಸೇರಿತು.

"ಯುಗ ಯುಗಗಳೇ ಸಾಗಲಿ, ನಮ್ಮ ಸ್ನೇಹ ಶಾಶ್ವತ" ಎಂದು ಮನ ಹೇಳಿತು.

ಯಾರು ಯಾರಿಗೂ ಶಾಶ್ವತ ಅಲ್ಲ, ಮುಂದೊಂದು ದಿನ ನನ್ನ ಕಣ್ಣೀರ ಕಟ್ಟೆಯೊಡೆದಾಗ ನಿಲ್ಲಿಸಲು, ಮತ್ತು ಸಾಧನೆ ಮಾಡಿದಾಗ ಖುಷಿ ಪಡಲು ನನ್ನ ಆತ್ಮೀಯ ಸ್ನೇಹಿತರು ಯಾವತ್ತೂ ನನ್ನೊಂದಿಗಿರುತ್ತಾರೆಂಬ ನಂಬಿಕೆಯಿಂದ,
"ಇಲ್ಲಿಗೆ ಮುಗಿದಿಲ್ಲ ಜೀವನ, ಮುಂದಿದೆ ಮಹಾಯುದ್ಧ",
ನಿಮ್ಮ ಹಾರೈಕೆ ನನ್ನನ್ನು ಆ ಮಹಾಯುದ್ಧದಲ್ಲಿ ಗೆಲ್ಲಿಸುತ್ತದೆಂಬ ಆತ್ಮವಿಶ್ವಾಸ ನನ್ನಲ್ಲಿದೆ.

ನಿಮ್ಮ ಪ್ರೀತಿಯ ಸ್ನೇಹಿತ,
ಅರವಿಂದರಾಜ ಬಿ ದೇಸಾಯಿ.