A r v i n d r a j   D e s a i

Monday, October 10, 2016

ಅಪ್ಪ ಅಂದರೆ ಆಕಾಶ ಅಲ್ಲ ಭೂಮಿ

ಎ ಆರ್ ಮಣಿಕಾಂತ್ ರವರ 'ಅಪ್ಪ ಅಂದರೆ ಆಕಾಶ' ಕಾದಂಬರಿಯ ವಿಮರ್ಶೆಯನ್ನು ದಿನಪತ್ರಿಕೆಯಲ್ಲಿ ಓದಿ ಬಹಳ ಖುಷಿಯಾಯಿತು. ವರ್ಷದ ಹಿಂದೆ ಅದರ ತುಣುಕುಗಳನ್ನು ಯಾವುದೋ ವಾಟ್ಸಾಪ್ ಮೆಸೇಜಿನಲ್ಲಿ ಓದಿದ್ದ ನೆನಪು ಕೂಡ ಇದೆ. ಕಾದಂಬರಿಯನ್ನು ಓದಲಾಗಿಲ್ಲ, ಆದರೆ ಸಮಯ ಬಿಡುವು ಮಾಡಿಕೊಂಡು ಖಂಡಿತ ಓದುತ್ತೇನೆ. 
         ಅಪ್ಪನ ಬಗ್ಗೆ ಕಾದಂಬರಿ ಬರೆವಾಗ, ನನಗೂ ನನ್ನಪ್ಪನ ಬಗ್ಗೆ ಒಂದು ಬ್ಲಾಗ್ ಬರೆಯುವ ಆಸೆಯಾಯಿತು. ಬ್ಲಾಗ್ ಬರೆಯಲು ಈ ಪುಸ್ತಕದ ಶೀರ್ಷಿಕೆ ಸ್ಪೂರ್ತಿ. ಹಳೆಯ ಮಾತೊಂದಿದೆ, ಮನೆಯವರೆಲ್ಲಾ ಸ್ನೇಹಿತರಂತಿರಬೇಕು, ಸ್ನೇಹಿತರೆಲ್ಲಾ ಮನೆಯವರಾಗಬೇಕು. ಅದರಂತೆ ಮನೆಯವರೆಲ್ಲರಿಗೂ ಹಲವು ಭಾವನಾತ್ಮಕ ಸನ್ನಿವೇಶಗಳ ಸಹಿತ ನನ್ನ ಆಪ್ತ ಸ್ನೇಹಿತ ನನ್ನ ಅಪ್ಪನನ್ನು ನಿಮಗೆ ಪರಿಚಯ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಬನ್ನಿ.
            ಶಾಲೆಗೆ ಹೋಗುವಾಗ ಸ್ನಾನ ಮಾಡಿಸಿ ಬಟ್ಟೆ ಹಾಕಿ ತಲೆ ಬಾಚಿ, ಒಂದು ಸಿಹಿಮುತ್ತು ಕೊಟ್ಟು ಅಪ್ಪನೇ ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದರು. ಚಿಕ್ಕವನಿದ್ದಾಗ ನನ್ನಂಥ ತುಂಟ, ತಂಟೆಕೋರ ಅವರು ಸಹಿಸಿಕೊಂಡಿದ್ದೇ ಹೆಚ್ಚು. ಎಲ್ಲೋ ಏನೋ ಕಿತಾಪತಿ ಮಾಡಿ, ಯಾರಿಗೋ ಹೊಡೆದು, ಹೊಡಿಸಿಕೊಂಡು ಮನೆಗೆ ಬರಬೇಕೆನ್ನುವಷ್ಟರಲ್ಲಿ ಯಾರೋ ನನ್ನ ಬಗ್ಗೆ ನನ್ನಪ್ಪನ ಬಳಿ ಪಿರಾದೆ ಹೇಳಿದಾಗ, ನನ್ನನ್ನು ಸುಧಾರಿಸುವುದಾದರೂ ಹೇಗೆ ಎಂದು ನನ್ನವ್ವ ನನ್ನಪ್ಪ ತಲೆ ಮೇಲೆ ಕೈಹೊತ್ತು ಕುಳಿತ ಕ್ಷಣಗಳಿಗೆ ಲೆಕ್ಕವಿಲ್ಲ. ನನ್ನಪ್ಪ ಬೈದು, ಹೊಡೆದು ಕೊನೆಗೆ ಪ್ರೀತಿಯಿಂದ ತಲೆ ಮೇಲೆ ಕೈಯಾಡಿಸಿ ಹಾಗೆ ಮಾಡಬಾರದೆಂದು ಹೇಳಿದ ಮರುದಿನವೇ ಮತ್ತೆ ನಾಯಿ ಬಾಲ ಡೊಂಕೇ. ನಾನು ತಂಟೆ ಕಡಿಮೆ ಮಾಡಿದ್ದು ಬೇರೆಯದೇ ಕಥೆ. 
        ನನ್ನ ಅಪ್ಪಾಜಿಯ ಸಂಬಳ ಮೊದಮೊದಲು ಸಾವಿರ ರೂಪಾಯಿ ಮಾತ್ರ ಇರುತ್ತಿತ್ತು. ನನ್ನಣ್ಣನಿಗೆ ಅಥವಾ ನನಗೆ ಯಾವುದೇ ಕೊರತೆ ತಿಳಿಯಬಾರದೆಂದು ಎಚ್ಚರ ವಹಿಸುತ್ತಿದ್ದರು. ಆದರೂ ಅದು ಹೇಗೋ ನಂಗೆ ಅರ್ಥವಾಗಿಬಿಡುತ್ತಿತ್ತು. ಒಂದು ಸಲ ನನ್ನ ಪ್ಯಾರಾಗಾನ್ ಚಪ್ಪಲಿ ಹರಿದುಹೋಗಿತ್ತು, ಅಪ್ಪನ ಚಪ್ಪಲಿಯೂ ಕಿತ್ತುಹೋಗಿತ್ತು. ರಾತ್ರಿ ಅಪ್ಪ ಮನೆಗೆ ಬಂದಾಗ ಬಲಗೈಯಲ್ಲಿ ನನಗೋಸ್ಕರ ಹೊಸ ಚಪ್ಪಲಿ ಇತ್ತು, ಅಪ್ಪನ ಚಪ್ಪಲಿಗೆ ಮಾತ್ರ ಹೊಲಿಗೆ ಬಿದ್ದಿತ್ತು. ಓದುವ ವಿಷಯಕ್ಕೆ ಬಂದಾಗ ಅವರಂಥ ಕರ್ಣ ಇನ್ನೊಬ್ಬರಿಲ್ಲ. ನಾನು ಇಂಜಿನೀರಿಂಗ್ ಓದುವಾಗ ಖರ್ಚು ನೋಡಿ ಮಾಡಬೇಕು ಅಂತ ಹಲವು ಬಾರಿ ಆರ್ಥಿಕ ಶಿಸ್ತಿನ ಉಪನ್ಯಾಸ ಕೊಟ್ಟಿದ್ದಾರೆ, ಆದರೆ ಒಂದು ಉತ್ತಮ ಪುಸ್ತಕ ಖರೀದಿ ಮಾಡಲು ಯಾವುದೇ ಚಿಂತೆ ಮಾಡಬೇಡವೆಂದು ಹೇಳಿದ್ದು ಅಪ್ಪನೇ. ಒಂದು ಉತ್ತಮ ಪುಸ್ತಕ ಒಬ್ಬ ಉತ್ತಮ ಸ್ನೇಹಿತನಿದ್ದಂತೆ ಎಂದು ಹೇಳಿ ಓದುವ ಗೀಳು ಹಚ್ಚಿಸಿದ್ದು ಅಪ್ಪ. ಗಾಂಧಿ ಜೊತೆಗೆ ಕಾಫಿ ಕುಡಿಯುವುದು, ಸಾಯಂಕಾಲ ಸ್ಟೀವ್ ಜಾಬ್ಸ್, ಮೈಕಲ್ ಸ್ಯಾಂಡೆಲ್, ಅಬ್ದುಲ್ ಕಲಾಂ, ಕುವೆಂಪು ಅವರಂಥ ಚಿಂತನ ಶೀಲ ವ್ಯಕ್ತಿಗಳ ಜೊತೆಗಿರುವುದು ಓದಿನಿಂದ ಮಾತ್ರ ಸಾಧ್ಯ. ನಿಮ್ಮ ವ್ಯಕ್ತಿತ್ವವನ್ನು ಪ್ರಭುದ್ಧವಾಗಿಸುವಲ್ಲಿ ಇವು ಸಹಾಯಕಾರಿಯಾಗುತ್ತವೆ. ನನ್ನ ಅಪ್ಪಾಜಿಯ ಸಲಹೆಯನ್ನು ನಿಮಗೂ ಕೊಡುತ್ತೇನೆ. ಓದಿ, ತುಂಬಾ ಓದಿ. ಇಂದಿನ ಓದುಗರೇ ಮುಂದಿನ ನಾಯಕರು. ಸಿಂಧೂ ನಾಗರಿಕತೆಯಿಂದ ಹಿಡಿದು ಇಂದಿನ ನ್ಯಾನೋ ಟೆಕ್ನಾಲಜಿ ವರೆಗೂ ವಿವಿಧ ರೀತಿಯ ಪುಸ್ತಕಗಳು ನಿಮ್ಮ ಕೈಬೆರಳ ತುದಿಯಲ್ಲಿವೆ. ಓದುವ ಪ್ರೀತಿ ಬೆಳೆಸಿಕೊಳ್ಳಬೇಕಷ್ಟೇ!!. 
            ನಾನು ಚಿಕ್ಕವನಿದ್ದಾಗ ಮನೆಗೆ ಫೋನ್ ಬೈಕು ತೆಗೆದುಕೊಳ್ಳೋಣ ಎಂದು ಹಠ ಹಿಡಿದಾಗ, ನನ್ನಪ್ಪಾಜಿ ಬೇಡವೆಂದು ಗದರುತ್ತಿದ್ದರು. ದುಡ್ಡಿಗೆ ಎಷ್ಟು ಲೆಕ್ಕ ಹಾಕುತ್ತಾರೆ ಎಂದೆನಿಸುತ್ತಿತ್ತು. ಆದರೆ ಅಪ್ಪ ಮನೆ ಕಟ್ಟಬೇಕು ಮತ್ತು ಇತರ ಭವಿಷ್ಯದ ಮಾಸ್ಟರ್ ಪ್ಲಾನ್ ಗಳನ್ನು ನಮ್ಮೆಲ್ಲರ ಮುಂದೆ ಮಂಡಕ್ಕಿ ತಿನ್ನುತ್ತಾ ಒಂದು ಸುಂದರ ಸಾಯಂಕಾಲ ಬಿಚ್ಚಿಟ್ಟಾಗ, ಅಪ್ಪ ಒಬ್ಬ ಆರ್ಥಿಕ ತಜ್ಞ ಅನ್ನಿಸಿದ್ದ. ನನ್ನಪ್ಪನ ಸಂಬಳ ಮತ್ತು ಹಣಕಾಸಿನ ನಿರ್ವಹಣೆ ಒಂದು ಥರ ಮಳೆಗಾಲದಲ್ಲಿ ಬಿದ್ದ ಮಳೆ ನೀರನ್ನು ಮಲೆನಾಡಿನ ಬೆಟ್ಟ ತನ್ನ ಮಡಿಲಲ್ಲಿ ಇಂಗಿಸಿಕೊಂಡು ವರ್ಷವಿಡೀ ಜಲಪಾತ ಸುರಿಸಿದಂತೆ. 
            ನಾವೇನೋ ಬೆಂಗಳೂರಿಗೆ ಬಂದು ನಾಲ್ಕು ಕಂಪ್ಯೂಟರಿನ ಅಕ್ಷರ ಕಲಿತಾಕ್ಷಣ ಏನೋ ಒಂಥರಾ ಹಮ್ಮು ಬಂದಿರುತ್ತದೆ. ಅಪ್ಪನಿಗೆ ಗೊತ್ತಾಗುವುದಿಲ್ಲವೆಂದು ಹಲವು ಬೇಡದ ಸಲಹೆಗಳನ್ನು ಕೊಡಲು ಮುಂದಾಗಿರುತ್ತೇವೆ. ಆದರೆ ಅಪ್ಪ ಬದುಕಿನ ಪಾಠದ ವಿಚಾರದಲ್ಲಿ ವಿಶ್ವವಿದ್ಯಾನಿಲಯ ಅನ್ನುವುದನ್ನು ಮರೆತೇ ಬಿಟ್ಟಿರುತ್ತೇವೆ. ಇಷ್ಟಾದರೂ ನಾವು ಹೇಳುವ ಮಾತನ್ನು ಕೈಕಟ್ಟಿಕೊಂಡು ಒಬ್ಬ ಆದರ್ಶ ವಿದ್ಯಾರ್ಥಿಯ ಥರ ಕೇಳುತ್ತಾರೆ.ನನಗೆ ದೇವರು ಏನಾದರೂ ವರ ಕೊಡುವುದಿದ್ದರೆ ನಾಳೆ ನಾನೂ ಅಪ್ಪನಾದಾಗ ನನ್ನ ಮಗಳು ಏನಾದರೂ ಹೇಳುವಾಗ ಇದೇ ಸಂಯಮದಿಂದ ಕೇಳುವ ಸಹನೆ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ. 
             ಮನೆ ಬಿಟ್ಟು ಸ್ವಲ್ಪ ದಿನ ಹೊರಗಿದ್ದಾಗ, ಪಾಲಕರ ಪ್ರೀತಿಯ ಮಹತ್ವ ತಿಳಿಯುತ್ತದೆ. ನನಗೂ ಹಾಗೆ ಆಗಿತ್ತು. ನನ್ನವ್ವ ಶ್ರೇಷ್ಠವಾದ ರುಚಿಯಾದ ಅಡುಗೆ ಮಾಡುತ್ತಾಳೆಂದು ಅರ್ಥವಾಗಿದ್ದೇ ನಾನು ಹೈಸ್ಕೂಲಿಗೆ ಮನೆ ಬಿಟ್ಟು ಬೇರೆ ಕಡೆ ಓದಲು ಹೋದಾಗ. ಹೊರಗಡೆ ಮಾಡುವ ರೊಟ್ಟಿ ನೋಡಿ, ನನ್ನವ್ವನ ರೊಟ್ಟಿ ನೆನಪಾಗುತ್ತಿದ್ದುದೇ ಆಗ. ಪಿ. ಲಂಕೇಶ್ ರ ಅವ್ವ ಪದ್ಯದ ಥರ ನನ್ನವ್ವನ ವ್ಯಕ್ತಿತ್ವ. ನಮ್ಮ ಮನೆಯ ಜಟಕಾ ಬಂಡಿಗೆ ನನ್ನಪ್ಪನ ಜೊತೆ ಇನ್ನೊಂದು ನೊಗಕ್ಕೆ ಹೆಗಲು ಕೊಟ್ಟು ಮುಂದಕ್ಕೆ ನಡೆಸಿದವಳು ನನ್ನವ್ವ. 
             ನನ್ನಣ್ಣನ ಬಗ್ಗೆ ಅಥವಾ ನನ್ನ ಬಗ್ಗೆ ಯಾರಾದರೂ ಪ್ರಶಂಶೆಯ ಮಾತನ್ನಾಡಿದಾಗ ತನ್ನನ್ನೇ ತಾನು ಮರೆತು ರಾಜ ಗಾಭೀರ್ಯ ಮೆರೆವ ವ್ಯಕ್ತಿ ನನ್ನಪ್ಪ. ಅಪ್ಪಾ ಪರೀಕ್ಷೆಯಲ್ಲಿ ಫೇಲಾದೆ ಎಂದಾಗ ಗೆಳೆಯನ ಥರ ಬೈದು ನಂತರ ಕ್ಷಮಿಸಿ ಮುಂದಿನ ಆಯ್ಕೆ ಕೊಡುವ ಜೀವಮಾನದ ಗೆಳೆಯ. ಅದಕ್ಕೆ ಹೇಳಿದ್ದು ಅಪ್ಪ ಅಂದರೆ ಆಕಾಶ ಅಲ್ಲ ಅಪ್ಪ ಭೂಮಿ ಥರ ಅಂತ. 
            ಸ್ನೇಹಿತರೇ, ನಮ್ಮ ಭವಿಷ್ಯಕ್ಕಾಗಿ ಅವರ ಜೀವನವನ್ನೇ ಮುಡಿಪಾಗಟ್ಟ ಅವರ ತ್ಯಾಗಕ್ಕೆ ಪ್ರತಿಯಾಗಿ ಏನನ್ನೂ ಕೊಡಲು ಸಾಧ್ಯವಿಲ್ಲ. ನಮ್ಮ ಒಳ್ಳೆಯ ವ್ಯಕ್ತಿತ್ವವೇ ಅವರ ಕನಸು, ಅದನ್ನು ನನಸಾಗಿಸುವಲ್ಲಿ ಶ್ರಮ ಪಡೋಣ. ಸಾದ್ಯವಾದರೆ ಅವರ ಪಾಠಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ. ಎಲ್ಲರ ಮನೆಯಲ್ಲಿ ಪ್ರೀತಿ ಬಾಂಧವ್ಯದ ಮಧ್ಯೆ ಗೋಡೆಗಳು ಏಳುತ್ತಿರುವ ಈ ಸಮಯದಲ್ಲಿ ಈ ನನ್ನ ಪುಟ್ಟ ಬ್ಲಾಗ್ ಮುದುಡಿದ ಬಾಂಧವ್ಯಗಳಿಗೆ ಚೈತನ್ಯ ತುಂಬುತ್ತದೆಂಬ ಆಶಯದೊಂದಿಗೆ 


--ಅರವಿಂದರಾಜ ಬಿ ದೇಸಾಯಿ.