A r v i n d r a j   D e s a i

Sunday, February 9, 2014

ಕುಮಾರ ಪರ್ವತ ಮತ್ತು ಬೆಟ್ಟದ ಮೇಲಿನ ಭಟ್ಟರ ಮನೆಗೆ ಒಂದು ಭೇಟಿ

ಪ್ರವಾಸ ಕಥನವೊಂದು ನನ್ನ ಬ್ಲಾಗಿನ ಕೈಚೀಲದೊಳಗೆ ಸೇರುತ್ತಿರುವುದು ಇದೇ ಮೊದಲು. ನನ್ನ ಆಪ್ತಸ್ನೇಹಿತ ಬಿಂದು ಒಂದೊಮ್ಮೆ ಕುಮಾರ ಪರ್ವತಕ್ಕೆ ಹೋಗೋಣವೆಂದು ಕಿಚ್ಚು ಹೊತ್ತಿಸಿದ್ದ. ಕೊಡಚಾದ್ರಿ ಬೆಟ್ಟ, ಕಳಾವರಿ ಬೆಟ್ಟ (ಸ್ಕಂದಗಿರಿ ಅಂತಲೂ ಕರೆಯುತ್ತಾರೆ), ನಂದಿ ಬೆಟ್ಟ (ಬೈಕಿನಲ್ಲಿ) ಟ್ರೆಕ್ಕಿಂಗ್ ಹೋಗಿ ಅನುಭವಿದ್ದ ನನಗೆ, ಇದೇನು ಮಹಾ ಹೋಗಿ ಬಂದರಾಯಿತೆಂದು ಕೊಂಡು ಹೋಗಿ ಬರಲು ಸಿದ್ದನಾದೆ. ಆದರೆ ಹೋಗಿ ಬಂದ ಮೇಲೆಯೇ ತಿಳಿಯಿತು, ಕುಮಾರ ಪರ್ವತವು ದಕ್ಷಿಣ ಭಾರತದಲ್ಲಿ ಅತ್ಯಂತ ಕ್ಲಿಷ್ಟಕರವಾದ, ಕಷ್ಟಕರವಾದ ಟ್ರೆಕ್ಕಿಂಗ್ ಜಾಡು ಇದೆಯೆಂದು. 
               ನಮ್ಮದು 14 ಜನರ ತಂಡ, ಇದರಲ್ಲಿ ಹದ್ದುಗಳಂತೆ ತುಂಬಾ ವೇಗವಾಗಿ ಚಾರಣ (ಟ್ರೆಕ್ಕಿಂಗ್ ಗೆ ಕನ್ನಡದಲ್ಲಿ ಹೀಗೆನ್ನುತ್ತಾರೆ) ಮಾಡುವವರಿದ್ದರು, ಪಾರಿವಾಳಗಳಂತೆ ವೇಗವಾಗಿ ಹೋಗುವವರಿದ್ದರು, ನಿಧಾನವಾಗಿ ನಡೆದರೂ ಗುರಿ ಮುಟ್ಟಲೇಬೇಕೆಂಬ ಛಲಗಾರರಿದ್ದರು, ಆಮೆಗತಿಯಲ್ಲಿ ನಡೆದು ನಮಗೂ ಗುರಿಗೂ ಸಂಬಂಧವಿಲ್ಲದಂತಿದ್ದವರು ಕೂಡ ಕೆಲವರು.  ಅಂತು ಎಲ್ಲರೂ ಸೇರಿ ಲೆಕ್ಕಾಚಾರವೆಲ್ಲ ಬಿಟ್ಟು ಹೊಸ ವಿಚಾರ ಅರಸುತ್ತ, ಹೊಸ ಅನುಭವಕ್ಕೊಸ್ಕರ, TT ಎಂಬ ಹುಚ್ಚು ಕುದುರೆಯನ್ನೇರಿ ಹೊರೆಟೆವು ಕುಕ್ಕೆ ಸುಬ್ರಮಣ್ಯನ ಸನ್ನಿಧಾನಕ್ಕೆ. 
         ಬೆಳಿಗ್ಗೆ 6 ಘಂಟೆಗೆ ಕುಕ್ಕೆ ಸುಬ್ರಮಣ್ಯನಿಂದ ಬೆಟ್ಟ ಹತ್ತಲು ಶಕ್ತಿಯ ಬೇಡಿಕೆಯನ್ನಿಟ್ಟು ಪುಷ್ಪಗಿರಿ(KP ಗೆ ಇರುವ ಇನ್ನೊಂದು ಹೆಸರು) ಯನ್ನು ಹತ್ತಲು ಸನ್ನದ್ಧರಾದೆವು ಅಲೆಮಾರಿಗಳಂತೆ, ಎರಡು ದಿನ ನಮಗೂ ಹೊರ ಜಗತ್ತಿಗೂ ಸಂಬಂದ ಇಲ್ಲದಂತೆ. 13 km ಕ್ರಮಿಸಬೇಕಾದದ್ದು ನಮ್ಮ ಮುಂದಿದ್ದ ಚಾಲೆಂಜ್(ಒಟ್ಟಾರೆ 26km). 6km ನಡೆದರೆ ಬರುವುದೇ ಭಟ್ಟರ ಮನೆ, ಅಲ್ಲಿಂದ 4km ಕಲ್ಲು ಮಂಟಪ, ಮುಂದೆ 3km ನಡೆದರೆ ಬರುವುದೇ ಕೆಪಿ ಯ ತುತ್ತ ತುದಿ. 
            ನಮ್ಮ ಚಾರಣ ಶುರು. ಕೆಳತುದಿಯಿಂದ ಮಂದ ಬೆಳಕಿನಲ್ಲಿ ತುಂಬಾ ಹುಮ್ಮಸ್ಸಿನಿಂದ   ದಟ್ಟವಾದ ಅರಣ್ಯ ಪ್ರದೇಶದಲ್ಲಿ ದಾರಿಗಳನ್ನು ತಡಕಾಡುತ್ತಾ, ನಡೆದಿದ್ದೇ ಹಾದಿ ಎಂಬಂತೆ ನಿಸರ್ಗದ ಮಗುವಾಗುತ್ತಾ 1km ದಾರಿ ಸವೆಯುವುದಕ್ಕೆ ತೆಗೆದುಕೊಂಡಿದ್ದು 1 ಘಂಟೆ. ಕೊಂಚ ಚಳಿಯಾಗುತ್ತಿದ್ದ ಕಾರಣ ಸೂರ್ಯನ ಆಗಮನವನ್ನು ನಿರೀಕ್ಷಿಸುತ್ತಿದ್ದ ನಮಗೆ  8ರ ಹೊತ್ತಿಗೆ ಬಂದ. ಸೂರ್ಯನ ಕಿರಣಗಳು ದಟ್ಟವಾದ ಅರಣ್ಯದ ಮರಗಳ ಎಲೆಗಳಿಂದ ಯಾರನ್ನೋ ತಪ್ಪಿಸಿಕೊಂಡು ಬಂದು ನಮ್ಮನ್ನು  ಚುಂಬಿಸುತ್ತಿದ್ದವು.  ತುಂಬು ಬಿಸಿಲು ಅನುಭವಿಸಬೇಕೆನ್ನುವವರ ಕರೆಗೆ ತಥಾಸ್ತು  ಎಂದಿದ್ದ ದೇವರು, ಅಮೇಲೆ ನಾವು ಅನುಭವಿಸುತ್ತಿದ್ದುದೆಲ್ಲ ತುಂಬು ಬಿಸಿಲು, ಒಣ ಪರಿಸರ, ಕಡಿದಾದ ದುರ್ಗಮವಾದ ಹಾದಿ, 45 ರಿಂದ 60 ಡಿಗ್ರಿ ಏರುದಾರಿಗಳು, "ಏನೇ ಆಗಲಿ ಮುಂದೆ ಸಾಗು ನೀ" ಎಂಬ ಸುದೀಪ್ ಚಿತ್ರದ ಹಾಡು ನಮ್ಮಲ್ಲಿರುವ ಹುಮ್ಮಸ್ಸನ್ನು ಜಾಗೃತಗೊಳಿಸಿ ಮುನ್ನಡೆಸುತ್ತಲೇ ಇತ್ತು. 
           ಅಲ್ಲಿ ಇಲ್ಲಿ ವಿಶ್ರಾಂತಿ ಪಡೆದು ಸವೆಸಿದ್ದಾಯಿತು ಅರ್ಧ ದಾರಿ. ಭಟ್ಟರ ಮನೆಯ ನೆನಪಾಗಿದ್ದು ಆಗಲೇ. ಇನ್ನೂ ಎಷ್ಟು ದೂರ ಇದೆ ಭಟ್ಟರ ಮನೆ? ಎಂಬ ನಮ್ಮ ಪ್ರಶ್ನೆಗೆ, ಇತರೆ ಟ್ರೆಕ್ಕರ್ ಗಳಿಂದ ಇನ್ನು ಸ್ವಲ್ಪ ದೂರಾನೇ ಎಂಬ ಉತ್ತರ ಮುದ ನೀಡುತ್ತಿತ್ತು. ನಡೆದು ನಡೆದೂ ಭಟ್ಟರ ಮನೆ ಬಾರದಿದ್ದಾಗ ಉತ್ತರ ನೀಡಿದ ಚಾರಣಿಗರನ್ನು ಬೈದು ಪಡುವ ವಿಕೃತ ಸಂತೋಷಕ್ಕೆ, ದಣಿವಾರಿಸುವ ಶಕ್ತಿಯೂ ಇದೆ ಅಂತ ನನಗೆ ಆವತ್ತೇ ಗೊತ್ತಾಗಿದ್ದು. ಅಂತೂ ಇಂತೂ ಬಂತು ಭಟ್ಟರ ಮನೆ. ಕುಮಾರಪರ್ವತಕ್ಕೆ ಪುಷ್ಪಗಿರಿಯೆಂಬ ಇನ್ನೊಂದು ಹೆಸರಿದೆಯೆಂದು ಕೆಲವರಿಗೆ ಗೊತ್ತಿಲ್ಲದಿದ್ದರೂ ಭಟ್ಟರ ಮನೆಯ ಬಗ್ಗೆ ಮಾತ್ರ ಗೊತ್ತಿರುತ್ತದೆ. 
           ಯಾರೀ ಭಟ್ಟರು? KP ಗೆ  ಹೋಗುವ ಚಾರಣಿಗರಿಗೆ ಆಪದ್ಬಾಂಧವರು ಮತ್ತು ಅನ್ನದಾತರೂ ಹೌದು. ಇವರೊಬ್ಬ ಪರಿಸರವಾದಿ. ಬೆಟ್ಟದ ಮೇಲೆ ಅಡಿಕೆ ತೋಟ, ಹೈನುಗಾರಿಕೆ ನಡೆಸುತ್ತಿರುವ ತುಂಬು ಹೃದಯದ ಜೀವ. ನನಗೆ ಇವರನ್ನು ನೋಡಿದರೆ, ಶಿವರಾಮ ಕಾರಂತರ 'ಬೆಟ್ಟದ ಜೀವ' ಕಾದಂಬರಿಯ ನಾಯಕರಾದ ಕಾಟುಮೂಲೆಯ ನಿರ್ಮಾತೃ ಗೋಪಾಲಭಟ್ಟರು ನೆನಪಾಗುತ್ತಾರೆ. ವಿಶ್ರಾಂತ ಮತ್ತು ಆದರ್ಶ ಜೀವನ. ಹಸಿದು ಬಂದವರಿಗೆ, ಇವರು ಮಾಡುವ ಮಾಮೂಲಿ ಅನ್ನ ಸಾಂಬಾರ್ ಮೃಷ್ಟಾನ್ನದಂತೆಯೂ ಮಜ್ಜಿಗೆ ಅಮೃತದಂತೆಯೂ ಅನಿಸಿದರೆ ಅತಿಶಯೋಕ್ತಿ ಅಲ್ಲ.
             ಅಲ್ಲಿಂದ ಶೇಷ ಪರ್ವತ. ಕುಮಾರ ಪರ್ವತಕ್ಕೆ ಇಬ್ಬರು ತಮ್ಮಂದಿರಿದ್ದಾರೆ, ಅವರೇ ಶೇಷ ಪರ್ವತ ಮತ್ತು ಸಿದ್ದ ಪರ್ವತ. ಎರಡರಲ್ಲಿ ಶೇಷ ಪರ್ವತ ಮಾತ್ರ ತುಂಬಾ ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿರುತ್ತಾನೆ. ಮನಸ್ಸಿಗೆ ಮುದ ನೀಡುವ ರುದ್ರ ರಮಣೀಯ ಸ್ಥಳ. ನೀವು ಅಚಲ ನಿರ್ದಾರಗಳೇನಾದರೂ ತೆಗೆದು ಕೊಳ್ಳಬೇಕಿದ್ದರೆ, ಶೇಷ ಪರ್ವತವನ್ನು ಸ್ಪೂರ್ತಿಯಾಗಿ ಇಟ್ಟುಕೊಳ್ಳಿ, ಅಷ್ಟೊಂದು ನಿಶ್ಚಲ ಹೆಬ್ಬಂಡೆ.  
         ಅಲ್ಲಿಂದ, ಒಣ ಹುಲ್ಲಿನ ನಡುವೆ, ಭಾರವಾದ ಹೆಜ್ಜೆಗಳನ್ನಿಡುತ್ತಾ ಏರುಪೇರಾದ ದಾರಿಗಳನ್ನು ದಾಟುತ್ತಾ ಬಂದು ತಲುಪಿದ್ದೇ ಕಲ್ಲು ಮಂಟಪಕ್ಕೆ. ಭಟ್ಟರ ಮನೆ ಬಿಟ್ಟರೆ ನಿಮಗೆ ನೀರು ಸಿಗುವುದೇ ಈ ಸ್ಥಳದಲ್ಲಿ. ಮೊದಲೆಲ್ಲಾ ಇಲ್ಲಿ ಕಾಡುಪ್ರಾಣಿಗಳು ಅಡ್ಡಾಡುತ್ತಿದ್ದವಂತೆ, ಪಾಪಿ ಮನುಷ್ಯ ಕಾಲಿಟ್ಟ ಮೇಲೆ ಪ್ರಾಣಿ, ಪಕ್ಷಿಗಳಾದರೂ ಹೇಗೆ ಉಳಿದಾವು..? ಕಲ್ಲು ಮಂಟಪಕ್ಕೆ ನಮ್ಮೆಲ್ಲಾ ಶಕ್ತಿ ಕುಂದಿ ಹೋಗಿತ್ತು. ಆದರೆ ನಮ್ಮ ತಂಡದಲ್ಲಿದ್ದ ಹದ್ದುಗಳು, ಪಾರಿವಾಳಗಳು ಹಾರಿಹೋಗಿದ್ದವು KP ಯ ತುತ್ತ ತುದಿಯ ಕಡೆಗೆ. ಈ ದಾರಿ ಸಾಮಾನ್ಯವಾದುದೇನಲ್ಲ. 60 ರಿಂದ 70 ಡಿಗ್ರಿ ವಾಲಿರೋ ಏರು ಕಲ್ಲು ಮಿಶ್ರಿತ ಹಾದಿಗಳು, ದುರ್ಗಮ, ಕಡಿದಾದ ದಾರಿ. ಒಂದೊಂದು ಬಂಡೆಗಳಂತೂ 80 ಡಿಗ್ರಿ ಏರಿರುತ್ತವೆ. ಇದನ್ನೆಲ್ಲಾ ನೋಡಿ, ಆವಾಗವಾಗ ಅನ್ನಿಸುತ್ತಿತ್ತು 'ಇವೆಲ್ಲಾ ಬೇಕಿತ್ತಾ?'ಅಂತ. ಆದರೂ ದಕ್ಷಿಣ ಭಾರತದ ಅಂತ್ಯಂತ ಕ್ಲಿಷ್ಟಕರವಾದ ಚಾರಣವನ್ನು ಮಾಡಲೇಬೇಕೆಂಬ, ತುತ್ತತುದಿಯನ್ನು ಮುಟ್ಟಲೇಬೇಕೆಂಬ ಭಂಡತನ ನಮ್ಮ ಬೆನ್ನು ತಟ್ಟುತ್ತಲೇ ಇತ್ತು.
          ನಮ್ಮ ಶಕ್ತಿ ತಲೆಯಿಂದ ಪಾದದವರೆಗೂ ಝೀರೋ ಆಗಿತ್ತು . ಇನ್ನೇನು ಮುಂದೆ ಹೋಗಕ್ಕಾಗಲ್ಲಾ ಎಂದುಕೊಳ್ಳುತ್ತಿರುವಾಗ ಹೊಳೆಯಿತು ಒಂದು ಉಪಾಯ. ಮುಂದೆ ಬಾಗಿ ತಲೆ ಬಗ್ಗಿಸಿ ಕೈಯಲ್ಲಿ ಒಂದು ಬೆತ್ತ ಹಿಡಿದು ಬೆಟ್ಟ ಹತ್ತಿದರೆ, ಎಷ್ಟು ದೂರ ಬೇಕಾದರೂ ಕ್ರಮಿಸಬಹುದೆಂದು. ನಮ್ಮೆಲ್ಲ ಸೊಕ್ಕಡಗಿದ ಮೇಲೆ, ಸಾಲು ಸಾಲು ಬೆಟ್ಟಗಳನ್ನು ಮೆಟ್ಟಿ ನಿಂತ ಮೇಲೆ ಬಂತು kpಯ ತುತ್ತತುದಿ. ನಿಮಗಿದು ಜಾಸ್ತಿ ಅನಿಸಿದರೂ, ನಮಗಾಗಿದ್ದು ಮಾತ್ರ ಜಗತ್ತು ಗೆದ್ದ ಅನುಭವ. ಎಷ್ಟೇ ಕಷ್ಟ ಇದ್ದರೂ, ದೃತಿಗೆಡದೇ ಕುಮಾರ ಪರ್ವತ ಹತ್ತಿದ ಕುಮಾರರು ನಾವು. ಆಗಿರುವ ಮಾನಸಿಕ ಸಂತೋಷಕ್ಕೆ, ದೈಹಿಕ ನೋವಿಗೆ ಮಲಗುವುದೇ ಮದ್ದು ಎಂದು ತಿಳಿದು, ತಂದಿದ್ದ ಚಪಾತಿ ತಿಂದು, ಫೈರ್ ಕ್ಯಾಂಪ್ ಹಾಕದೇ, ಬೆಟ್ಟದ ಮೇಲೊಂದು ಮನೆಯ ಮಾಡಿ ಎಂಬ ಕವಿವಾಣಿಯಂತೆ, ನಾವೂ ತಾತ್ಕಾಲಿಕ ಮನೆಯೊಂದ ನಿರ್ಮಿಸಿ, ಮಲಗುವ ಚೀಲ (sleeping bag)ದಲ್ಲಿ ಹೊಕ್ಕಿದ್ದೇ ಸುಮಧುರ ಕ್ಷಣ, ಶುಭರಾತ್ರಿ.
ಬೆಳಗಾಯಿತು, ಸೂರ್ಯೋದಯ ನೋಡುವ ಸಮಯ. ಬೆಟ್ಟದ ಮೇಲಿನಿಂದ, ವಿಶೇಷವಾಗಿ 5712 ಅಡಿಗಳಷ್ಟು ಎತ್ತರದಿಂದ ನೋಡುವುದೇ ಒಂದು ಅಂದ ಒಂದು ಚಂದ. ಮೋಡದ ಮರೆಯಲ್ಲಿ ನಿಂತು ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಸೂರ್ಯ, ಬೆಳಿಗ್ಗೆ 7ರ ಸುಮಾರಿಗೆ ದರ್ಶನ ಭಾಗ್ಯ ಕೊಟ್ಟ. ಕೆಳಗಡೆ ಬಿದ್ದರೆ ದೇಹ ದೊರಕದಂಥ ದಟ್ಟಾರಣ್ಯ, ಎದುರಿಗೆ ಸೂರ್ಯ, ಸೂಯನ ಕೆಳಗೆ ಸಮುದ್ರದಂತೆ ಕೊನೆಯೇ ಇರದ ಬೆಟ್ಟಗಳ ಸಾಲು. ಪಕೃತಿ ಎಂಬ ಹುಡುಗಿಗೆ ಕುಂಕುಮ ಬೊಟ್ಟು ಇಟ್ಟಂತಾಗಿಬಿಟ್ಟಿತ್ತು ಈ ಸೂರ್ಯನ ಆಗಮನ. ನಮ್ಮ ಸಮೀಪದಲ್ಲಿ ತೇಲುತ್ತಿರುವ ಮೋಡಗಳು, ನಮ್ಮನ್ನೇ ನಾವು ಕಳೆದುಕೊಂಡ ಅನುಭವ. ಸೂರ್ಯೋದಯ ನೋಡಲಿಕ್ಕೆ ಅಲ್ಲಿಗೆ ಹೋಗಬೇಕಾ? ಎಂಬ ನನ್ನ ಸ್ನೇಹಿತ ಕೇಳಿದ ಪ್ರಶ್ನೆಗೆ ತಾತ್ವಿಕ ಮೆರುಗು ನೀಡಿತ್ತು ಈ ನಿಸರ್ಗ. ಕವಿ ಹೃದಯ ಜಾಗೃತವಾಗುವುದೇ ಎಂಥ ಸ್ಥಳದಲ್ಲಿ. ಅದರ ಸೊಬಗನ್ನು ಎಷ್ಟು ಬಾಚಿ ತಬ್ಬಿ ಹಿಡಿದರೂ, ತೃಪ್ತಿ ಸಿಗದು. ಪ್ರಕೃತಿಯ ಪಂಚಭೂತಗಳೆದುರು, ಮನುಷ್ಯ ಎಷ್ಟೇ ದೊಡ್ಡವನಾದರೂ, ಚಿಕ್ಕವನು. 
            ಜನಶ್ರಾವಂತಿಯಲ್ಲಿ ಮತ್ತೆ ಬೇರೆಯುವುದಕ್ಕೆ, ನಿಸರ್ಗದ ಮಡಿಲಿನಿಂದ ಎದ್ದು, ಟೆಂಟ್ಗಳನ್ನು ಕೊಂಕುಳಲ್ಲಿ ಸಿಕ್ಕಿಸಿಕೊಂಡು ಬರಬರನೇ ತುಂಬಾ ಜಾಗೃತವಾಗಿ ನಡೆಯತೊಡಗಿದೆವು. ಹತ್ತಿದ್ದಕ್ಕಿಂತ ಕಡಿಮೆ ಸಮಯ ತೆಗೆದುಕೊಂಡು ಕೆಳ ತುದಿ ಸೇರಿಕೊಂಡೆವು. ಸೋಮವಾರಪೇಟೆ ಕಡೆಯಿಂದಲೂ ಇಳಿಯಬಹುದು. 
             ಈ ಟ್ರೆಕ್ಕಿಂಗ್, ನಮ್ಮ ಶಕ್ತಿಯೇನು? ಸಾಮರ್ಥ್ಯವೇನು? ನಿಸರ್ಗದ ಮುಂದೆ ನಾವೆಷ್ಟು ಚಿಕ್ಕವರು? ನಮ್ಮ ಅಹಂ? ಈ ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಮತ್ತೂ ಆ ಎಲ್ಲಾ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ದೊರೆತಿದ್ದೂ ಸುಳ್ಳಲ್ಲ. ನಿಮ್ಮ ನಿಮ್ಮ ದೇಹ ದಂಡಿಸುವುದಕ್ಕೂ ಬೇಕಾದರೂ kp ಹತ್ತಿ ಇಳಿಯಬಹುದು. ಹಳೆಯ ಗಾದೆ ಮಾತಿದೆ "ರೊಕ್ಕ ಇದ್ದರೆ ಗೋಕರ್ಣಕ್ಕೆ ಹೋಗು, ಸೊಕ್ಕಿದ್ದರೆ ಯಾಣಕ್ಕೆ ಹೋಗು" ಅಂತ. ಸೊಕ್ಕಿದ್ದರೆ ಯಾಣಕ್ಕಲ್ಲ (ಬಸ್ ವ್ಯವಸ್ಥೆ ನಿರ್ಮಾಣ ಆಗಿರುವುದರಿಂದ, ಯಾಣದ ಬುಡದವರೆಗೂ ಹೋಗಿ ಬರಬಹುದು) ಕುಮಾರ ಪರ್ವತ ಹತ್ತಿ ಬನ್ನಿ.
         ಚಾರಣಿಗರಿಗೆ ಸ್ವರ್ಗ ಸುಖ ನಿದುವಂಥ ಸ್ಥಳ.  "hell to be there but heaven to see" ಆ ಮಾತು ಸುಳ್ಳಲ್ಲ ಬಿಡ್ರಿ.  ನಮ್ಮಂಥ ಅಮಾವಾಸ್ಯೆ ಹುಣ್ಣಿಮೆಗೆ ಚಾರಣ ಮಾಡುವವರಿಗೆ ಕಷ್ಟಸಾದ್ಯ. ನಾನು ಇನ್ನೊಮ್ಮೆ ಅಲ್ಲಿಗೆ ಹೋಗುವುದು ಮಾತ್ರ ತಿರುಕನ ಕನಸು ಎಂದು ಹೇಳುತ್ತಾ, ಇಷ್ಟವಾದರೆ ಶಭಾಷ್ ಅನ್ನಿ. ಇಷ್ಟ ಆಗ್ಲಿಲ್ಲ ಅಂದ್ರೆ ಕೋಳಿ ಮೊಟ್ಟೆ ತಗೊಂಡು ಹೊಡಿರಿ ಪರವಾಗಿಲ್ಲ, ನಿಮ್ಮ ಪ್ರತಿಕ್ರಿಯೆ ಮಾತ್ರ ಯಾವತ್ತೂ ಇರಲಿ. 

ತಂಡ: ಬಿಂದು, ಚೇತನ್, ನಿತಿನ್, ಅಬ್ದುಲ್, ಸಚಿನ್, ಶುಕ್ಲಾ, ನಿಧಿನ್, ವಿಶ್ವ, ಬಸವ, ಹರೀಶ, ಮಿಲ್ಲಾ, ಕಾರ್ತಿಕ್, ರಾಕೇಶ್, ನಾನು(ಅರವಿಂದ). 

ಮಾಹಿತಿ:
1. ಭಟ್ಟರ ಮನೆ ಊಟ - 90 ರೂ 
    ಮೊಬೈಲ್ ನಂಬರ್ : 9448647947 (ಹೋಗುವ ಮುನ್ನಾ ದಿನ ಅವರಿಗೆ ತಿಳಿಸಿ)
2. Forest Dept entry fees: 200/- per head..
3. ನೀರು ಸಿಗುವ ಸ್ಥಳ : 
                                ಒಂದು ಫಾಲ್ಸ್ ಹತ್ತಿರ (after 3km)
                                ಭಟ್ಟರ ಮನೆ 
                                ಕಲ್ಲು ಮಂಟಪ 
                                after forest end
4. ಮಾರ್ಗ: ಬೆಂಗಳೂರು > ಚನ್ನರಾಯಪಟ್ಟಣ > ಸಕಲೇಶಪುರ > ಶಿರಾಡಿ ಘಾಟ್ > ಕುಕ್ಕೆ 
5. ದೂರ: 
    ಬೆಂಗಳೂರು > ಕುಕ್ಕೆ : 282km
    ಕುಕ್ಕೆ to kp ಕೆಳತುದಿ : 1.2km
    kp ಕೆಳತುದಿ ಇಂದ ತುತ್ತತುದಿ: 13km