A r v i n d r a j   D e s a i

Sunday, April 21, 2013

ಪಾಪಿಗಳ ಲೋಕದಲ್ಲಿ:- ಭೂಗತ ಲೋಕದ ತೆರೆ ಮರೆಯ ವಿಮರ್ಶೆ

ನಾನು ಯಾವಾಗಲೂ ಕಾದಂಬರಿಗಳನ್ನು  ಕೊಳ್ಳುವಾಗ, ಅದರ ಪೂರ್ವಾಪರಗಳನ್ನು ಅಭ್ಯಸಿಸಿ, ಕೊಂಡು ಓದಿ ಆನಂದ ಪಡುವ ಸಾಮಾನ್ಯ ಜೀವಿ. ನನಗೆ ಇತಿಹಾಸ, ದೇಶ, ಯುದ್ಧ, ರಾಜಕೀಯ, ಪ್ರೇಮ ಕಾದಂಬರಿಗಳ ಮೇಲೆ ಹೆಚ್ಚಿನ ಆಸಕ್ತಿ. ಆದರೂ ಈ ಬಾರಿ ನನಗೇ ಗೊತ್ತಿಲ್ಲದ ಹಾಗೆ ಈ ಹೊತ್ತಿಗೆಯನ್ನು ಕೊಂಡಾಗಿತ್ತು, ಇನ್ನು ಓದಿ ಮುಗಿಲಸಲೇಬೇಕಲ್ಲ, ಇಲ್ಲವೆಂದರೆ ಪೈಸಾ ವಸೂಲ್ ಹೇಗಾದಿತು?...  ಓದಲೋ? ಬೇಡವೋ? ಎನ್ನುವ ನನ್ನ ತಳಮಳಕ್ಕೂ ಕಾರಣವಿದೆ. ಇದು ಒಂದು ಭೂಗತ ಲೋಕದ ರಕ್ತಸಿಕ್ತ ದಿನಗಳ ಚುಟುಕು ಚಿತ್ರಣ  ಮೂಡಿಸುವಂಥಹ ರವೀ ಬೆಳೆಗೆರೆಯವರ ಕಾದಂಬರಿ.
ಬಿಸಿರಕ್ತದ ತರುಣ, ಎಲ್ಲಾದರೂ ಅನ್ಯವಾದಾಗ, ಅಪಚರವಾದಾಗ, ಪಾಪವಾದಾಗ, ಉರಿದು ಬೀಳುವ ಕ್ರುದ್ಧನಾಗುವ ನಾನು, ಅದೆಷ್ಟು ಸಂಯಮದಿಂದ ಈ ಪಾಪದ, ಕೊಲೆಗಡುಕರ, ತಲೆಹಿಡುಕರ, ಧರ್ಮಹೀನ ಮನುಷ್ಯರ ಕಥೆಗಳನ್ನು ಓದಿದೆನೆಂದು ಆಶ್ಚರ್ಯ ಮೂಡುತ್ತದೆ. ನನ್ನಂಥಹ ಯುವಕರ ಪಾಲಿಗೆ ಏನು ಸಂದೇಶ ಕೊಡುತ್ತದೆ ಈ ಪುಸ್ತಕ? ಏನು ಸಾಧಿಸಲೆಂದು? ಯಾರ ಸ್ಪೂರ್ತಿಗಾಗಿ, ಈ ಪುಸ್ತಕ ಹಿಡಿದೆನೆಂದು ಈ ಹೊತ್ತಿಗೂ ತಿಳಿದಿಲ್ಲ. ಬಹುಷಃ ರವಿ  ಬೆಳೆಗೆರೆಯಂಥ ಮಾಗಿದ ಕಾದಂಬರಿಕಾರರ ಇದೊಂದು ಪುಸ್ತಕ ಓದಿದರೆ ತಪ್ಪಲ್ಲ ಎಂದೆನಿಸಿ ಶುರುಮಾಡಿದೆ. 
                ಎಂಭತ್ತು ತೊಂಭತ್ತರ ದಶಕದ ರಕ್ತದೋಕುಳಿಯ, ಸಾಲು ಸಾಲು ಕೊಲೆಗಳ, ಸಾಲು ಸಾಲು ಮಾನಭಂಗಗಳ, ರೌಡಿ ಷೀಟರುಗಳ ಅಬ್ಬರ ಕೋಪತಾಪ, ಜನಸಾಮಾನ್ಯರ ಅಸಹಾಯಕತೆ, ರಾಜಕಾರಣಿಗಳ ಅವಕಾಶವಾದಿತನ, ಸತ್ಯ ಘಟನೆಗಳ ಸರಮಾಲೆಯೇ ಈ ಕಾದಂಬರಿ. ಕತ್ತಲಾದರೆ ಎಚ್ಚರಗೊಳ್ಳುವ ಈ ಭೂಗತ ಲೋಕದ ಪ್ರತೀ ರೌಡಿಗಳ ಮನಸ್ತಿತಿ, ಮನಸ್ತಾಪ, ಹೆದರಿಕೆ, ಭಂಡತನ, ಕ್ರೌರ್ಯ, ಹಿಂಸೆ, ಮೃಗತನ, ಚಾಣಾಕ್ಷತನ, ರೌಡಿಗಳೇ ಹೇಳಿದ ಕಥೆಗಳ ಸುತ್ತ ಗಿರಕಿ ಹೊಡಿಯುತ್ತದೆ 'ಪಾಪಿಗಳ ಲೋಕದಲ್ಲಿ'. 
                 ಕೊತ್ವಾಲ್ ರಾಮಚಂದ್ರನ ರೋಲ್ ಕಾಲ್, ಜಯರಾಜ್ ತಾನಿರುವ ಜೈಲಿನಿಂದಲೇ ಜಗತ್ತನ್ನು ಆಳಿದ ರೀತಿ, ಆಯಿಲ್ ಧಂದೆಯನ್ನು ಅಷ್ಟೊಂದು ಅಚ್ಚುಕಟ್ಟಾಗಿ ನಡೆಸಿದ ಆಯಿಲ್ ಕುಮಾರನ ರೀತಿ, ಮುಟ್ಟಿದರೆ ಮಾಸುವ ಮುತ್ತಪ್ಪ ರೈ ಎಂಬಾತನ ರೀತಿ, ಎಂಥ ಚಿಕ್ಕ ವಯಸ್ಸಿನ ಪುಡಿ ರೌಡಿಗಳಲ್ಲಿ ಭೂಗತ ಲೋಕದ ಭಯಾನಕ ಆಸೆಗಳ ಬಾಗಿಲು ತೆರೆದುಕೊಂಡರೆ ಆಶ್ಚರ್ಯವೇನಿಲ್ಲ. ಆದರೆ, ಅದರ ಹಿಂದಿದ್ದ (ತೆರೆಯ ಹಿಂದಿನ) ಮಸಲತ್ತುಗಳು, ಪೋಲೀಸರ ಬೆಂಡೆತ್ತು (ಏರೋಪ್ಲೇನ್ ), ಯಾವ ರೌಡಿಯ ಬಿಸಿರಕ್ತವನ್ನು ತಣ್ಣಗೆ ಮಾಡುವಷ್ಟು ಬಲಶಾಲಿಯಾಗಿದ್ದವು, ಈಗಲೂ ಇವೆ. 
                ಈ  ಕಾದಂಬರಿ ಓದುವಾಗ, ನಾನಿರುವ ಸ್ಥಳವಾದ ರಾಜಾಜಿನಗರದ  ಕೆಲವು ದೃಶ್ಯಗಳು ಬಂದರೆ, ಬಸವನಗುಡಿಯ ಬಗೆ ಕತೆಗಳಲ್ಲಿ ಪ್ರಸ್ಥಾಪವಾದರೆ, ನಾನಿರುವ ಪ್ರದೇಶದಲ್ಲಿ ಇಂಥ ಭಯನಕಗಳು ನಡೆದಿವೆಯಾ? ರಕ್ತದ ಹೊಳೆಹರೆದಿದೆಯಾ? ಎಂದು ಯೋಚನಾ ಲಹರಿಗೆ ಇಳಿದರೆ, ಒಂದು ಕ್ಷಣ ಮೈಯಲ್ಲಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಈಗ ಆ ರಕ್ತದ ಹೊಳೆ ಬತ್ತಿ ಹೋಗಿ ಟಾರು ರೋಡು ಹಾಕಿರುವುದೂ ಅಷ್ಟೇ ಸತ್ಯ. ಆ ಕಾಲದಲ್ಲಿ ಅಷ್ಟೊಂದು ಭಾಯಾನಕಗಳು ಘಟಿಸುವುದಕ್ಕೆ ಕಾರಣವೇನಿರಬಹುದೆಂದು ನನ್ನಲ್ಲಿ ನಾನೇ ವಿಮರ್ಶೆ ಮಾಡಿಕೊಂಡಾಗ, ಬಿಟ್ಟಿ ದುಡ್ಡು ಬರುವಾಗ ಬಗ್ಗಿಸಿ ದುಡಿದು ಯಾಕೆ ತಿನ್ನಬೇಕು ಎಂಬ ಸೋಮಾರಿಗಳೇ ಆಗಿನ ರೌಡಿಗಳು! ಕುಡಿತ, ಜೂಜು, ಹೆಂಗಳೆಯರ ಸಹವಾಸ, ಒಟ್ಟಿನಲ್ಲಿ ಒಂದು ವರ್ಣರಂಜಿತ ಬದುಕು. ಇದನ್ನು ಸಾಗಿಸಲಿಕ್ಕೆ ಬೇಕಾಗಿದ್ದು ಒಂದು ಬ್ಲೇಡು, ಒಂದು ಮಚ್ಚು (ಲಾಂಗ್) ಒಂದಿಷ್ಟು ಭಂಡತನ, ಮುಗೀತು. ಭಂಡತನದ ಪರಮಾವಧಿ ಭೂಗತ ಲೋಕದೊಳಕ್ಕೆ 'ರೆಡ್ ಕಾರ್ಪೆಟ್'.. 
                  ಜಯರಾಜ್, ಕೊತ್ವಾಲ್ ರಾಮಚಂದ್ರ,  ಆಯಿಲ್ ಕುಮಾರ, ಮುತ್ತಪ್ಪ ರೈ, ಎಂ ಸಿ ಪ್ರಕಾಶ್, ಬಿಂಡ, ಸಿದ್ದ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಮುಚ್ಚ ರಾಜೇಂದ್ರ, ಡೆಡ್ಲಿ ಸೋಮ, ಚಂದು, ರಾಜಶೇಖರ್, ಬಸವ, ಕರಿಯ, ಸಕ್ರೆ, ಶ್ರೀರಾಂಪುರ್ ಕಿಟ್ಟಿ, ಕುಳ್ಳ ನಾರಾಯಣ, ಪಟ್ರೆ ನಾರಾಯಣ, ಕೋಟೆ ನಾಗರಾಜ, ಕೋಟೆ ರಾಜೇಂದ್ರ, ಕಾಲಾ ಪತ್ಥರ್, ಕೋಳಿ ಫ್ಹಯಾಜ್, ಬಲರಾಮ್, ಚೋಟು ಪ್ರಕಾಶ್, ಹೀಗೆ ಭೂಗತ ಲೋಕದ ಭಂಡರ ಹೆಸರುಗಳನ್ನು ಬೆರೆಯುತ್ತ ಕುಳಿತರೆ ಕಾಗದ ಸಾಕಾಗದು. ಇವರೆಲ್ಲರ ಸ್ಥೂಲ ಚಿತ್ರಣ ಕಣ್ಣು ಮುಂದೆ ಬಂದು ಹೋಗುವಂಥ ಶಕ್ತಿ ಬೆಳೆಗೆರೆಯವರ ಬರವಣಿಗೆಗಿದೆ.
                 ಹಾಯಾಗಿ ಕಾಲೇಜಿಗೆ ಹೋಗಿ ಗೆಳೆಯರ ಜೊತೆ ಗಂಟೆಗಟ್ಟಲೆ ಗೀಳು ಮಾತಾಡಿ, ಅಲ್ಲೊಂದಿಷ್ಟು ಇಲ್ಲೊಂದುಷ್ಟು ಶಿಕ್ಷಕರ, ಅಪ್ಪ, ಅವ್ವ, ಅಣ್ಣನ ಹತ್ತಿರ ಕೀಟಲೆ ಮಾಡಿಕೊಂಡು, ಚಟಕ್ಕಾಗಿ ಕೆಲವು ಕನ್ನಡ ಪುಸ್ತಕಗಳನ್ನು ಓದಿಕೊಂಡು, ಬೋರು ಹೊಡೆದಾಗ ಟ್ರಿಪ್ ಹಾಕುವ ಅದೃಷ್ಟ, ಬಹುಚಂದದ ಬದುಕನ್ನು ಬಹುಷಃ ಈ ಭೂಗತ ಲೋಕದ ಕಿರೀಟವಿಲ್ಲದ ಅನಭಿಷಕ್ತ ದೊರೆಗಳು ನೋಡಿರಲಿಕ್ಕಿಲ್ಲ, ಅನುಭವಿಸಿರಲಿಕ್ಕಿಲ್ಲ.
              ನೋಡಿದ್ದರೆ, ಅನುಭವಿಸಿದ್ದರೆ ಅಂಥ ಲೋಕಕ್ಕೆ ಕಾಲಿಡುತ್ತಿರಲಿಲ್ಲವೇನೋ! ನಮ್ಮ ಹಿರಿಯರ ಪುಣ್ಯದಿಂದಲೇ ಏನೋ? ನಮಗೆ ಇಂಥ ಬದುಕು ಸಿಕ್ಕಿದೆ, ಕಲಿಯೋಣ ಸವಿಯೋಣ .. 
               ಈ ಕೋಲ್ಡ್ ಬ್ಲಡೆಡ್ ಮರ್ಡರ್ ರೌಡಿಗಳನ್ನು, ಹಿರೋಗಳನ್ನಾಗಿ ವಿಜ್ರುಂಬಿಸಿರುವುದು ಕೊಂಚ ಮಟ್ಟಿಗೆ ಖೇದ ಉಂಟು ಮಾಡುವ ಸಂಗತಿ. ಹೊತ್ತು ಕಳೆಯಲು ಈ ಹೊತ್ತಿಗೆಯನ್ನು ಓದುವುದಾದರೆ, ಓದಿ ಆನಂದಪಡಿ. ಯಾವುದೋ ಸಂದೇಶಕ್ಕಾಗಿ, ಸ್ಪೂರ್ತಿಗಾಗಿ, ಇದನ್ನು ಓದುವುದಾದರೆ, ಖಂಡಿತ ಬೇಡ. 
                   ಪಾಪದ್ದು ಅನ್ನಿಸಿದರೆ, ಪ್ರತ್ಯುತ್ತರ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. 


ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ.