A r v i n d r a j   D e s a i
Showing posts with label KARNATAKA. Show all posts
Showing posts with label KARNATAKA. Show all posts

Monday, January 12, 2015

ಸಂಕ್ರಾಂತಿ ಬಂತು : ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ

ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಟೇಬಲ್ ಮೇಲೆ ಹರವಿಕೊಂಡು, ಪೆನ್ನು ಹಿಡಿದು ಬ್ಲಾಗ್ ಬರೆಯಲು ಶುರು ಮಾಡಿದ್ದೇನೆ. ನಾನು ಚಿಕ್ಕವನಿದ್ದಾಗಿನ ನೆನಪು. ಸಂಕ್ರಾಂತಿ ಬಂತೆಂದರೆ, ಎಳ್ಳು ಸಕ್ಕರೆ ಅಥವಾ ಬೆಲ್ಲದ ಚೂರುಗಳನ್ನು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿಕೊಂಡು, ನನ್ನ ಅಪ್ಪಾಜಿ ಹೇಳಿಕೊಟ್ಟ ವಾಕ್ಯ "ಎಳ್ಳು ತಿಂದು ಒಳ್ಳೊಳ್ಳೆ ಮಾತಾಡಿ" ಎಂದು ಸರಿಸುಮಾರು ಎಲ್ಲರಿಗೂ ಶುಭಾಶಯ ಕೋರುತ್ತಾ ಊರೆಲ್ಲ ತಿರುಗಿ ಬಿಡುತ್ತಿದ್ದೆ. ಚಿಕ್ಕವರಾಗಿದ್ದಾಗ ಮುಗ್ಧತೆಯಿಂದ ಎಲ್ಲ ಮನೆಯನ್ನು ಭೇಟಿಯಾಗಿ ಎಳ್ಳು ಕೊಡುವುದು ಒಂದು ಸಂಭ್ರಮ.
       ಹಬ್ಬಗಳು ಬಂತೆಂದರೆ ನನಗಂತೂ ಫುಲ್ ಖುಷಿ. ಹಬ್ಬದ ದಿನದಂದು ಮದುವೆ ಮನೆಯ ವಾತಾವರಣ. ನನ್ನ ಅವ್ವನಿಗಂತೂ ಭರಪೂರ ಕೆಲಸ. ಪೂಜೆ ಆಗುವವರೆಗೂ ತಿನ್ನಲು ಏನೂ ಕೊಡುವುದಿಲ್ಲ ಎಂದು ನನ್ನವ್ವ ಹೇಳಿದಾಗ, ಹೊಟ್ಟೆ ಚುರುಗುಟ್ಟುತ್ತಾ ಹುಸಿ ಕೋಪದಿಂದ ಕಾಯುತ್ತಿದ್ದುದೇ ಸಂಭ್ರಮ. ಚಳಿಗಾಲದಲ್ಲಿ ಮೈಯಲ್ಲಾ ಬಿರುಕು ಬಿಟ್ಟು, ನಂತರ ಸಂಕ್ರಮಣ ಬಂದಾಗ, ಎಳ್ಳು ಎಣ್ಣೆಯ ಅಂಶವನ್ನು ಮೈಯಲ್ಲಿ ಬೆರೆಸುತ್ತದೆ ಎಂದು ವೈಜ್ಞಾನಿಕ ಟಿಪ್ಪಣೆ ಕೊಟ್ಟು, ಅಪ್ಪ ಸ್ವತಃ ತಾನೇ ನನ್ನನ್ನು ಸ್ನಾನ ಮಾಡಿಸುತ್ತಿದ್ದರು, ಅದೇ ಸಂಭ್ರಮ.
          ನನ್ನವ್ವ ಎಳ್ಳನ್ನು ಹಸನು ಮಾಡಿ, ಬಿಸಿಲಿಗೆ ಕಾಯಿಸಿ, ಅದರಲ್ಲಿ ಬೆಲ್ಲ ಬೆರೆಸಿ ಎಳ್ಳು ಹೋಳಿಗೆ ಮಾಡಿ, ತಿನ್ನಲು ಕೊಟ್ಟಾಗ ಅದಕ್ಕಿಂತ ಸಂಭ್ರಮ ಇನ್ನೊಂದಿಲ್ಲ. ನನ್ನ ಅಣ್ಣ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಸಂಕ್ರಮಣದ ಮೆರವಣಿಗೆಗೆ ನಾನೇ ರಾಜ. ಅಣ್ಣನಿಲ್ಲದೇ ಕಳೆದ ಎಲ್ಲಾ ಸಂಕ್ರಾಂತಿಗಳಲ್ಲೂ ಆತನ ಕೊರತೆ ಕಾಡುತ್ತಿರುತ್ತಿತ್ತು. ಆದರೆ ನನ್ನ ಅಪ್ಪಾಜಿ, ಅಪ್ಪನಾಗಿ ಅಗತ್ಯ ಬಿದ್ದಾಗ ಅಣ್ಣನಾಗಿ, ಸ್ನೇಹಿತನಾಗಿ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು.


     ನಾನು ಚಿಕ್ಕವನಾಗಿದ್ದಾಗಿನಿಂದ ಹಿಡಿದು, ಇಲ್ಲಿಯವರೆಗೆ ಹಲವಾರು ಬದಲಾವಣೆಗಳನ್ನು ನೋಡುತ್ತಾ ಬಂದಿದ್ದೇನೆ. ನನ್ನ ಅವ್ವ ಮನೆಯಂಗಳದಲ್ಲಿ ಒಂದು ದೊಡ್ಡ ಹಂಡೆ ಹಿಡಿಯುವಷ್ಟು ಜಾಗದಲ್ಲಿ ರಂಗೋಲಿ ಹಾಕುತ್ತಾಳೆ. ಬೆಂಗಳೂರಿನ ಹೆಣ್ಣುಮಕ್ಕಳು ಅಪಾರ್ಟಮೆಂಟ್ ನಲ್ಲಿ ರಂಗೋಲಿ ಹಾಕಲು ಜಾಗ ಹುಡುಕುತ್ತಿರುತ್ತಾರೆ. ನನ್ನವ್ವ ಎಳ್ಳು ಬೆಲ್ಲ ಸೇರಿಸಿ ಉಂಡೆ ಮಾಡಿ ಕೊಡುತ್ತಿದ್ದರೆ, ನನ್ನ ಅಕ್ಕ ಸುಜಾತಾ ಮನೆಯಿಂದಲೇ ಎಳ್ಳುಂಡೆ ಮಾಡಿಸಿ ಮಕ್ಕಳಿಗೆ ಕೊಡುತ್ತಾಳೆ, ಇದೂ ಒಂಥರಾ ಔಟ್ ಸೋರ್ಸಿಂಗ್. ಆಗ ಊರ ತುಂಬೆಲ್ಲಾ ಎಳ್ಳು ಹಂಚುತ್ತಿದ್ದೆವು, ಈಗ ಪಕ್ಕದ ಮನೆಯವರಿಗೂ ಕೊಡುವ ಪದ್ಧತಿ ಇಲ್ಲ. ಆಗ 'ಚರಿಗೆ ಚಲ್ಲು' ವಂಥಾ ಕಾರ್ಯಕ್ರಮಗಳನ್ನೂ ಆಚರಿಸಿದ್ದಿದೆ., ಈಗ ಯಾರ ಮನೆ, ಹೊಲಗಳಲ್ಲೂ ಇದು ಕಾಣ ಸಿಗುವುದಿಲ್ಲ. ಎಳ್ಳು ಬೆಲ್ಲವನ್ನು ಸಂಭಂಧಿಕರಿಗೆ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಕೊಟ್ಟು ಬರುವ ಪದ್ಧತಿಯುತ್ತು, ಈಗೆಲ್ಲ ಎಳ್ಳು ಬೆಲ್ಲ ಚಿತ್ರ ಬಿಡಿಸಿ ಮೊಬೈಲಿನಲ್ಲಿ ಕಳುಹಿಸುವ ಸಮಯ ಬಂದೊದಗಿದೆ. ಹಬ್ಬದ ದಿನದಂದು ಮೆಸೇಜಿಗೆ ಒಂದು ರೂಪಾಯಿ ಮಾಡಿದಾಗಿನಿಂದ ಮೆಸೇಜೂ ಕಡಿಮೆಯಾಗಿಬಿಟ್ಟಿದೆ. ಈಗೇನಿದ್ದರೂ ಫೆಸ್ ಬುಕ್ , ವಾಟ್ಸ್ ಆಪ್.
     ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಆಚರಣೆಗಳೂ ಬದಲಾಗಬೇಕು. ಹಾಗಂತ ಹೋಳಿಗೆ ಬದಲಾಗಿ ಫಿಜ್ಜಾ ಆಗಲಿ, ಪಾಯಸದ ಬದಲಾಗಿ ಕೂಲ್ ಡ್ರಿಂಕ್ಸ್ ಬರಬಾರದು. ಹಬ್ಬದ ಆಚರಣೆಯಲ್ಲಿ ಬದಲಾವಣೆ ಮಾಡಿದರೂ ಸಂಭ್ರಮಕ್ಕೆ ಚ್ಯುತಿ ಬರಬಾರದು. ಅಜ್ಜಿಯರು ಮೊಮ್ಮಕ್ಕಳಿಗೊಸ್ಕರ ವಾದರೂ ಆಚರಣೆಗಳನ್ನು ಆಚರಿಸಿ, ಅದರ ಮಹತ್ವ ಕಾಪಾಡಬೇಕು. ಬಹುಷಃ ಪೀಳಿಗೆಯಿಂದ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದೇ . ಹಿರಿಯರು ಈ ಹಬ್ಬಗಳನ್ನು ಯಾವುದೇ ಕಾರಣವಿಲ್ಲದೆ ಆಚರಣೆ ಮಾಡುವಂಥ ದಡ್ಡರಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಟ್ಟದಂತೂ ಇಲ್ಲ,.
        ಹಬ್ಬಗಳು ಬರೀ ರುಚಿಯಾದ ತಿಂಡಿ ತಿನ್ನುವ ನಾಲಿಗೆಗೆ ಸಂಭಂದಿಸಿದ ವಿಷಯ ಅಲ್ಲ, ಇದು ಮನಸ್ಸಿಗೆ ಸಂಭಂದಿಸಿದ ವಿಷಯವೂ ಹೌದು. ಮನಸ್ಸಿನ ಬದಲಾವಣೆಗಳಿಗೆ, ಪ್ರತಿಜ್ಞೆಗಳಿಗೆ ಒಳ್ಳೆ ದಿನ. ಸಂಕ್ರಾಂತಿಯಂತೂ ಹೇಳಿ ಮಾಡಿಸಿದ ದಿನ. ಈ ಸಂಕ್ರಾಂತಿಗೆ ಒಂದು ಪ್ರತಿಜ್ಞೆ ಮಾಡೋಣ. ಬೆಳಿಗ್ಗೆ ಎದ್ದು ಉಸಿರು ಒಳಗೆ ಎಳೆದುಕೊಳ್ಳುತ್ತಾ ನಾನು ಆರೋಗ್ಯದಿಂದ ಇದ್ದೇನೆ ಎಂದುಕೊಳ್ಳೋಣ. ಉಸಿರು ಹೊರಗೆ ಬಿಡುತ್ತಾ ಅನಾರೋಗ್ಯವೆಲ್ಲಾ ಹೊರಹಾಕುತ್ತಿದ್ದೇವೆ ಎಂದು ಕೊಳ್ಳೋಣ. ಎಳ್ಳು ಬೆಲ್ಲ ತಿಂದು ಇನ್ನೆಲ್ಲ ನಮಗೆ ಒಳ್ಳೆ ದಿನಗಳೇ, ಎಂದು ಕೊಳ್ಳೋಣ. ವ್ಯತಿಗತ ಮನಸ್ತಾಪಗಳಿಗೆ ಪೂರ್ಣ ವಿರಾಮ ಹೊಕೋಣ. ಭೂಲೋಕದಾಚೆಯ ಸ್ವರ್ಗದ ಬಾಗಿಲು ತೆರೆಯಲಿ ಬಿಡಲಿ, ನಮ್ಮೊಳಗೊಂದು ಅರಿವಿನ ಸ್ವರ್ಗದ ಬಾಗಿಲು ಇರುತ್ತದಲ್ಲ, ಅದರ ಬಾಗಿಲು ನಾವೇ ಖುದ್ದಾಗಿ ತೆರೆಯೋಣ. ಮಕರ ಜ್ಯೋತಿಯ ಹಂಗು ತೊರೆದು, ಮನದೊಳಗಿನ ಮನೆಯ ಬಾಗಿಲಲ್ಲಿ ಮಮತೆಯ ದೀಪ ಹಚ್ಚಿಡೋಣ. ಅದು ಬೆಳಗುವ ಪ್ರೀತಿಯ ಬೆಳಕಲ್ಲಿ ಕಾಣುವ ಜಗದಲ್ಲಿ ಸಣ್ಣತನಗಳಿಗೆ ಜಾಗವಿರದಿರಲಿ.
        ಮಕ್ಕಳೆಲ್ಲಾ ಊರಿಗೆ ಹೋದಾಗ, ಅಪ್ಪ ಅವ್ವಂದಿರು ಮಾಡಿ ಬಡಿಸುವ ಪ್ರೀತಿಯ ಊಟದಂತೆ, ಅಣ್ಣಂದಿರು ಪ್ರೀತಿಯಿಂದ ಮೊಟಕುವಂತೆ, ಮನಸ್ಸಿನಿಂದ ಮನಸ್ಸು ಬೆಸೆಯುವ, ಎದೆಯಿಂದ ಎದೆಗೆ ಹರಿಯುವ ಚೈತನ್ಯದ ಮಹಾಪೂರವಾಗಲಿ ಈ ಹಬ್ಬ ಸಂಕ್ರಾಂತಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಇಷ್ಟವಾದರೆ ತಿಳಿಸಿ, ಇಷ್ಟವಾಗದಿದ್ದರೂ ತಿಳಿಸಿ. ಅರವಿಂದರಾಜ್ ಬಿ ದೇಸಾಯಿ

Tuesday, October 22, 2013

ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ? : ಒಂದು ವಿಮರ್ಶೆ, ಒಂದು ಚಿಂತನೆ.

'Give me your blood, I promise you the freedom'. ಎಂದು ಹೇಳಲು ಯಾವುದೇ ಮನುಷ್ಯನಿಗೆ ಎದೆಯಲ್ಲಿ ಅದೆಷ್ಟು ಕ್ರಾಂತಿಯ ಕಿಚ್ಚು ಹೊತ್ತಿರಬೇಕು? ಅದೆಂಥ ಗುಂಡಿಗೆ ಇರಬೇಕು?. ಹೌದು ೧೯೪೫ ಆ, ೧೮ ರಂದು ಕಣ್ಮರೆಯಾದಂಥ, ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರ ಕಣ್ಮರೆಯ ಚಿತ್ರಣವನ್ನು ತಮ್ಮ ಕಣ್ಮುಂದೆ ತೆರೆದಿಡುವ ಕೆಲಸವನ್ನು ಮಾಡಿದವರು, ಜಗತ್ತಿನ ಸೋಗಿನ ಬಟ್ಟೆಯನ್ನು ಕಳಚಿ ಬೆತ್ತಲಾಗಿ ತೋರಿಸುವ, 'ಬೆತ್ತಲೆ ಜಗತ್ತು' ಪ್ರಖ್ಯಾತಿಯ ಪ್ರತಾಪ್ ಸಿಂಹ.
'The great escape', ಕನ್ನಡ ಅವತರಣಿಕೆಯನ್ನು, ೬ನೇ ಕ್ಲಾಸಿನಲ್ಲಿದ್ದಾಗ, ಬೆರಗುಗಣ್ಣಿನಿಂದ ಓದಿದ್ದ ಬಾಲಕ ನಾನು. ಆವತ್ತಿನಿಂದ ಇಲ್ಲಿಯವರೆಗೆ, ನೇತಾಜಿ ಎಲ್ಲಿ ಹೋದರು? ಎಂಬ ಪ್ರಶ್ನೆ ಯಾವತ್ತಿಗೂ ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಉತ್ತರ ಅರಸಿ, ಪುಸ್ತಕವನ್ನು ತೆರೆದು, ಓದಿ, ಮುಗಿಸಿದರೂ ಉತ್ತರ ಸಿಕ್ಕಿಲ್ಲ. ನೇತಾಜಿ ಜೀವನದ ಸುತ್ತ ಒಂದು ಸಣ್ಣ 'ಪಿಕ್ ನಿಕ್' ಹೋಗಿ ಬರಲಾಗಿದೆ. ಹೃದಯ ಭಾಗದ ಕಥೆ ಮಾತ್ರ ಕುತೂಹಲಕಾರಿಯಾದ 'ನೇತಾಜಿ ಕಾಣೆಯಾದುದರ ಬಗ್ಗೆಯೇ'!!
ಭಾರತಾಂಬೆಯನ್ನು ಬ್ರಿಟಿಷರ ಬಂಧನದಿಂದ ಬಿಡುಗಡೆ ಮಾಡಬೇಕೆಂಬ ಮಹದಾಸೆ ಹೊತ್ತ ಮಹಾನ್ ನಾಯಕರಲ್ಲಿ ಇವರೂ ಒಬ್ಬರು. ೧೯೩೫ರಲ್ಲಿ ಕಾಂಗ್ರೆಸ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚಲೋ ದಿಲ್ಲಿ ಎಂದು ಕೆರೆಕೊಟ್ಟರು. ಅವರ ಕಿಚ್ಚು ಹೊತ್ತಿಸುವ ಭಾಷಣವನ್ನು ಕೇಳಿ ಬ್ರಿಟಿಷರು ಬೆಪ್ಪಾಗಿ, ಅವರನ್ನು ಗೃಹಬಂಧನದಲ್ಲಿ ಇಡುತ್ತಾರೆ. ಅವರು ಗೃಹಬಂಧನದಿಂದ ಕಾಶ್ಮೀರ್, ಕಾಬುಲ್ ಮೂಲಕ ಬರ್ಲಿನ್ ತಲುಪಿದ್ದು, ನಿಜಕ್ಕೂ ರೋಮಾಂಚನಕಾರಿ, ಇತಿಹಾಸ ಎಂದೂ ಮರೆಯದ ಘಟನೆ. ನೇತಾಜಿ ದೇಶವಲ್ಲದ ದೇಶಕ್ಕೆ ಹೋಗಿ, ಹೊರದೇಶದಲ್ಲಿರುವ ಭಾರತೀಯರನ್ನು ಒಕ್ಕೂಡಿಸಿ, ೩೦,೦೦೦ ಜನರ 'ಇಂಡಿಯನ್ ನ್ಯಾಷನಲ್ ಆರ್ಮಿ (INA)' ಸ್ಥಾಪಿಸಿದ್ದು ಸಾಮಾನ್ಯ ವಿಷಯವೇನಲ್ಲ.
ನಂತರ ಮುಸ್ಸೊಲಿನಿ, ಸರ್ವಾಧಿಕಾರಿ ಹಿಟ್ಲರ್, ಜಪಾನ್ ಮಿಲಿಟರಿಯನ್ನು ಸಂಧಿಸಿ, ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಒಪ್ಪಂದ ಮಾಡಿಕೊಂಡಿದ್ದು, ಸುಭಾಷರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ. ರಷ್ಯಾ ಆವತ್ತಿನ ಮಟ್ಟಿಗೆ ಜಗತ್ತಿನ ಎರಡನೇ ಶಕ್ತಿ ಕೇಂದ್ರ, ಅಂಥ ಶಕ್ತಿಯ ಜೊತೆಗೆ ಕೈ ಜೋಡಿಸ ಹೋದ ಭಾರತದ ಬೆಂಕಿ ಚೆಂಡು ಚಂದ್ರ ಬೋಸ್.
ಈ ಕಾದಂಬರಿಯು ನೇತಾಜಿ ಕಥಾಕಥಿತ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂಬುದರ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ. ಅವರು ಕಾಣೆಯಾದುದರ ಬಗ್ಗೆ ಹಲವಾರು ರೋಚಕ, ಕುತೂಹಲಕಾರಿ ಕಥೆಗಳನ್ನು, ಮಜಲುಗಳನ್ನಾಗಿ ಹೆಣೆಯಲಾಗಿದೆ. ೧೯೪೫ ಆ ೧೮ ರಂದು ನೇತಾಜಿ ಸಾವನ್ನಪ್ಪಿಲ್ಲವಾದರೆ ಹೋದರಾದರೂ ಎಲ್ಲಿಗೆ? ಎಂಬ ಪ್ರಶ್ನೆಯನ್ನು ದಟ್ಟವಾಗಿಸುವಲ್ಲಿ, ಲೇಖಕ ಯಶಸ್ವಿ.
ನಾನು ಯಾವುದೇ ರಾಜಕೀಯ ಪಕ್ಷದ ಪರ/ವಿರೋಧಿ ಅಲ್ಲವಾದರೂ, ಕಾಂಗ್ರೆಸ್ಸನ್ನು ಪ್ರತಿ ಹಂತದಲ್ಲೂ ದೂಷಿಸಿರುವುದು, ಈ ಕಾದಂಬರಿಯ ಪಾರದರ್ಶಕತೆಯನ್ನು ಪ್ರಶ್ನಿಸಿಸಲು ಪ್ರೇರಣೆ ನೀಡುತ್ತದೆ.
ಒಂದು ಮೂಲದ ಪ್ರಕಾರ, ಅವರು ರಹಸ್ಯವಾಗಿ ರಷ್ಯ ತೆರೆಳಿದ್ದಾರೆ  ಎಂತಾದರೆ, ಇನ್ನೂ ಕೆಲವು ಮೂಲಗಳ ಪ್ರಕಾರ, ಅವರು ರಷ್ಯದಲ್ಲಿ ಯುದ್ಧ ಖೈದಿಯಾಗಿದ್ದಾರೆ ಎಂಬುದು, ಬಲೂಚಿಸ್ಥಾನದಲ್ಲೆಲ್ಲೋ  ಕೊಲೆಯಾದರು, ೧೯೬೭ರ ತನಕ ವಿಜಯ್ ಭಗವಾನ್ ಎಂಬ ಹೆಸರಿನಲ್ಲಿ ಜೀವಿಸಿರುವುದು, ೧೯೭೫ರ ತನಕ ಗಮ್ ನಾಮೀ ಬಾಬಾ ಎಂಬ ಹೆಸರಿನಲ್ಲಿ ಜೀವಿಸಿರುವುದು. ಕೇವಲ ಊಹಾಪೋಹವಷ್ಟೇ, ಯಾವುದಕ್ಕೂ ಖಚಿತ ಮಾಹಿತಿಗಳಿಲ್ಲ, ಸಾಕ್ಷಿ ಪುರಾವೆಗಳಿಲ್ಲ.
ಹಾಗಾದರೆ ನೇತಾಜಿ ಕಣ್ಮರೆ ಅಷ್ಟೊಂದು ನಿಗೂಢವಾಗಿ ಉಳಿಯಲು ಕಾರಣವೇನು? ಭಾರತ ಸರಕಾರನಾ? ಭಾರತದ ಆಯೋಗಕ್ಕೆ ಸ್ಪಂದಿಸದ ಇತರೆ ರಾಷ್ಟ್ರಗಳಾ? ಸ್ವಾತಂತ್ರ್ಯ ಪೂರ್ವ ಒಳ ರಾಜಕೀಯವಾ? ಇದೆಲ್ಲದರ ಮೇಲೆ ಮುಖರ್ಜಿ ಆಯೋಗ, ಕೊಂಚ ಮಟ್ಟಿಗೆ ಬ್ಯಾಟರಿ ಹಾಕಿ ಸತ್ಯ ಬಗೆಯಲು ಪ್ರಯತ್ನವೇನೋ ಮಾಡಿತಾದರೂ, 'ನೇತಾಜಿ ಆ ವಿಮಾನ ಅಪಘಾತದಲ್ಲಿ ಸತ್ತಿಲ್ಲವೆಂದು' ಸಾಕ್ಷಿ ಸಮೇತ ಪ್ರತಿಪದಿಸಿತಾದರೂ, ನೇತಾಜಿ ಎಲ್ಲಿ ಹೋದರು ಎಂಬ ಪ್ರಶ್ನೆ ಕೋಟಿ ರೂಪಾಯಿ ಪ್ರಶ್ನೆಯಾಗಿಯೇ ಉಳಿಸಿಬಿಟ್ಟಿತು.


ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ, ಶ್ರೆಯೋಭಿಲಾಷಕ್ಕಾಗಿ ಬಡಿದಾಡಿದ ನೇತಾಜಿಯ ಬಗ್ಗೆ ಯಾಕಿಷ್ಟು ತಾತ್ಸಾರ? ಅಂಥ ಮಹಾನ್ ನಾಯಕರು ಕಾಣೆಯಾದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವಾಗ ನಮ್ಮಂಥ ಜನಸಾಮಾನ್ಯರು ಕಾಣೆಯಾದರೆ ಗತಿಯೇನು?

ಜಪಾನ್ ಹೇಳುವ ಪ್ರಕಾರ, ವಿಮಾನ ಅಪಘಾತದಲ್ಲಿ ನೇತಾಜಿ ತೀರಿ ಹೋದರು ಎಂಬ ಸುಳ್ಳನ್ನು, ಭಾರತದ ಜನಮಾನಸ ಯಾವತ್ತೂ ಒಪ್ಪುವುದಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ, 'ನೇತಾಜಿಯ ಸಾಧನೆಗಳನ್ನು ನಾವು ಎಂದು ಮರೆಯುತ್ತೆವೆಯೋ ಅಂದೇ ಅವರು ಸತ್ತಂತೆ', ಎಂದು ಹೇಳುತ್ತಾ, ಮತ್ತೆ ಹುಟ್ಟಿ ಬನ್ನಿ ನೇತಾಜಿ, ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀವು, ನಿಮ್ಮನ್ನೆಂದೂ ಮರೆವೆವು ನಾವು. ನಿಮಗೂ ಏನಾದರೂ ಅನಿಸಿದರೆ, ಪ್ರತ್ಯುತ್ತರಕ್ಕಾಗಿ ಯಾವತ್ತೂ ಕಾಯುವ, ನಿಮ್ಮವ
ಅರವಿಂದರಾಜ ಬಿ ದೇಸಾಯಿ. 

Tuesday, March 1, 2011

ನಿತ್ಯೋತ್ಸವ ನಗರಿಯಲ್ಲಿ ಕನ್ನಡದ ತೇರು

   ಬೆಂಗಳೂರಿನಲ್ಲಿ ಫೆಬ್ರುವರಿ 4,5,6 ರಂದು ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕ ಭಾದಕಗಳ 
ದೂರದೃಷ್ಟಿಯ ಅವಲೋಕನಾ ಲೇಖನ ಇದು. ಪಬ್ಬು, ಬಾರ್ ಗಳ ಭರಾಟೆಯಂಥ ನಿತ್ಯ ಉತ್ಸವಗಳ ನಗರಿಯಲ್ಲಿ ಅಕ್ಷರ ಜಾತ್ರೆ ಯಶಸ್ವಿಯಾದದ್ದು ಕನ್ನಡದ ಮಟ್ಟಿಗೆ ಆರೋಗ್ಯಕರ ಬೆಳವಣಿಗೆ. ಆದರೆ ಯಶಸ್ವೀ ಎಂಬುದು ಯಾವ ಅರ್ಥದಲ್ಲಿ ಅವಲೋಕಿಸಬಹುದು? 70,000 ದಿಂದ 1,00,000 ಜನ ಇದಕ್ಕೆ ಸಾಕ್ಷಿಯಾದರೆಂದು ಪೇಪರಿನಲ್ಲಿ ಓದುವಾಗ ನಗು ಬಂತು, ಯಾಕೆಂದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಜನರನ್ನು ಸೇರಿಸುವುದು ರಾಜಕೀಯ ಗಿಮಿಕ್. ಇರಲಿ, ಸಾಹಿತ್ಯ ಸಮ್ಮೇಳನಗಳ ಇತಿಹಾಸ ಏನಿರಬಹುದು? ಇವುಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಕೊಡುಗೆ ಯಾವ ರೀತಿಯದ್ದು, ಎಂಬುದಕ್ಕೆ ಉತ್ತರ ಹುಡುಕಲು ಇಂಟರ್ನೆಟ್ ನಲ್ಲಿ ಹುಡುಕಿದ್ದು, ತಡಕಾದಿದ್ದು ನಿಮ್ಮ ಮುಂದಿಡುತ್ತಿದ್ದೇನೆ. 
   
     1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದಯ. ಆಗ ಮೇರು ಬರಹಗಾರರಿದ್ದರು, ಕನ್ನಡವನ್ನು ತಮ್ಮ ಉಸಿರಾಗಿಸಿಕೊಂಡವರಿದ್ದರು. 1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಿ.ವಿ.ಜಿ.ಯವರು ಮಂಡಿಸಿದ ವಿಷಯಗಳು, ಕರ್ನಾಟಕದ ಏಕೀಕರಣ ಚಳುವಳಿಯ ಸ್ವರೂಪವನ್ನೇ ಬದಲಾಯಿಸಿದವು. 1948ರಲ್ಲಿ ಬೇಂದ್ರೆ, "ಹಕ್ಕಿ ಹಾರುತಿದೆ ನೋಡಿದಿರಾ", ಎಂದಾಗ ವೇದಿಕೆ ಮುಂದಿದ್ದ ಮೂವತ್ತು ಸಾವಿರ ಜನ ತಲೆಯೆತ್ತಿ ನೋಡಿದ್ದರು. 1958ರಲ್ಲಿ ವಿ.ಕೃ.ಗೋಕಾಕ ಬಳ್ಳಾರಿಯಲ್ಲಿ ಮಂಡಿಸಿದ ಹೊಸ ವಿಚಾರಗಳು ನವ್ಯ ಸಾಹಿತ್ಯ ಎಂಬ ಹೊಸ ಚಳುವಳಿಗೆ ಕಾರಣವಾದವು. 1960ರಲ್ಲಿ ಅ.ನ.ಕೃ ಮಣಿಪಾಲದಲ್ಲಿ, ಬೆಂಗಳೂರಿನಲ್ಲಿನ ಕನ್ನಡದ ಸ್ಥಿತಿಗತಿಗಳು, ಚಿತ್ರರಂಗದ ಪರಿಭಾಷಾ ಒಲವಿನ ಬಗ್ಗೆ ಚರ್ಚೆ ನಡೆದಾಗ, ಡಬ್ಬಿಂಗ್ ವಿರೋಧಿ ಚಳುವಳಿಗಳು ನಡೆದವು. ಇನ್ನೂ ಕೆಲವು ಮೇರು ಕವಿಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಕರ್ನಾಟಕ ಏಕೀಕರಣವಾಗುವ ತನಕ ಕುವೆಂಪು ಅಧ್ಯಕ್ಷತೆವಹಿಸುವುದಿಲ್ಲವೆಂದಾಗ, ಅವರ ಪ್ರಕಾರ, ಕರ್ನಾಟಕ ಏಕೀಕರಣವಾದ ಮೇಲೆ ಅಂದರೆ 1957ರಲ್ಲಿ ಅಧ್ಯಕ್ಷತೆ ವಹಿಸಿದರು. ಕನ್ನಡದ ಕೆಲಸಗಳಿಗೆ ಅಡ್ಡಿಯಾಗುವುದೆಂಬ ಕಾರಣಕ್ಕೆ, ಕೊನೆಯವರೆಗೂ ತಿ.ನಂ.ಶ್ರೀ. ಅಧ್ಯಕ್ಷತೆ ವಹಿಸದೇ ಇದ್ದರು.


      ಇನ್ನು ಈ ಸಮ್ಮೇಳನದ ವಿಷಯಕ್ಕೆ ಬರೋಣ. ನಾನೂ 70,000 ಜನರಲ್ಲಿ ಒಬ್ಬನಾಗಿ ಸಮ್ಮೇಳನದ ಎಲ್ಲಾ ಚರ್ಚೆಗಳಲ್ಲಿ ಜವಾಬ್ದಾರಿಯುತ ಪ್ರೇಕ್ಷಕನಾಗಿ ಭಾಗವಹಿಸಿದ್ದೇನೆ, ಖುಷಿ ಪಟ್ಟಿದ್ದೇನೆ. ನನ್ನ ಖುಷಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಈ ಲೇಖನ. 
ಅಧ್ಯಕ್ಷರು-ಪ್ರೊ.ಜಿ.ವೆಂಕಟಸುಬ್ಬಯ್ಯನವರು ಈ ಬಾರಿಯ ಕನ್ನಡದ ತೇರು ಎಳೆದ ಸಾಹಸದ ಸಾರ್ಥಕ ರೂವಾರಿ. ಪ್ರಭಂದ, ವ್ಯಕ್ತಿಚಿತ್ರ, ಸಂಪಾದನೆಯಲ್ಲಿ ಇವರ ಕೊಡುಗೆ ಅನನ್ಯ. ಬಿ.ಎಂ.ಶ್ರೀ. ವೆಂಕಣ್ಣಯ್ಯನವರಂಥ ಕನ್ನಡದ ಸಾಹಿತ್ಯದ ಕಲಿಗಳ ಶಿಷ್ಯರಿವರು. 98ರ ಇಳಿ ವಯಸ್ಸಿನ ಇವರು, ತನು ಮನ ಧನಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿದರು. ಜೀ.ವಿ ಎಂದೇ ಪ್ರಖ್ಯಾತರಾದ ಇವರು ಮುಪ್ಪಾಗಿರಬಹುದು ಆದರೆ ಇವರು ಮಾಡಿದ ಕನ್ನಡದ ಕೆಲಸಕ್ಕೆ ಎಂದಿಗೂ ಮುಪ್ಪಿಲ್ಲ.

ಈ ಬಾರಿ ಕೆಲವು ನಿರ್ಣಯಗಳೂ ಮಂಡನೆಯಾದವು , ಕೆಲವು ಸವಕಲು ವಿಷಯಗಳು ಚರ್ಚೆಯಾದವು. 
ಆಗಿನ ಈಗಿನ ಹಳ್ಳಿ ಜೀವನ, ಒಂದು ಅನುಪಯುಕ್ತ ಚರ್ಚೆ ನಡೆಯುತ್ತಿತ್ತು,
ಒಬ್ಬ ಮಹಾನುಭಾವ ಆಗಿನ ಹಳ್ಳಿ ಜೀವನವೇ ಚನ್ನಾಗಿತ್ತು, ಈಗೆಲ್ಲ ಯಾಂತ್ರಿಕವಾಗಿದೆ ಎಂದ. ಅರ್ರೇ, ಬದಲಾವಣೆ ಜಗದ ನಿಯಮವಲ್ಲವೇ?, ಕಾಲಕ್ಕೆ ತಕ್ಕಂತೆ ಜನ ಬದಲಾಗುತ್ತಾರೆ, ತಪ್ಪೇನಿಲ್ಲ. ಹಾಗೆ, ಮತ್ತೊಂದು ವಿಷಯ ಚರ್ಚೆ ಕೂಡಾ ಆಯಿತು, 20 ರಿಂದ 30 ವರ್ಷದ ಯುವಕರು ಪೇಟೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲ ತಿರುಗಿ ಹಳ್ಳಿಗಳತ್ತ ಹೊರಡಬೇಕು ಎಂದು ಆಜ್ಞೆಯನ್ನೂ ಮಾಡಿದರು. ಆದರೆ ದಿನಗೂಲಿ 200 ರೂಪಾಯಿ ಕೂಡ ಸಿಗದ ಹಳ್ಳಿಯಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗ ಪೇಟೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ. ಇಂಥ ವಿಷಯಗಳನ್ನು ಚರ್ಚಿಸುವಾಗ ವಾಸ್ತವಿಕತೆ, ವ್ಯೆಜ್ಞಾನಿಕತೆಯನ್ನು ಮನಗಂಡು ವಿಷಯಗಳನ್ನು ಆಯ್ಕೆ ಮಾಡಬೇಕೆಂಬುದು  ನನ್ನ ಅನಿಸಿಕೆ.

ಮುಖ್ಯವಾದ ಸಂಗತಿ ನಿರ್ಣಯಗಳದ್ದು, ಸಮ್ಮೇಳನದ ಫಲವಾಗಿ ಇಂಥ ನಿರ್ಣಯ ಜನಾಭಿಪ್ರಾಯವಾಗಿ ರೂಪುಗೊಂಡು, ಕಾರ್ಯ ರೂಪಕ್ಕೆ ಬಂದಿತು ಎಂದು ಹೇಳಬಲ್ಲ ಉದಾಹರಣೆ ಇದುವರೆಗೂ ಸಿಕ್ಕಿಲ್ಲ.   ಸಮ್ಮೇಳನಾಧ್ಯಕ್ಷರು  ೩ ದಿನಗಳ ವೈಭವಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಅವರ ಭಾಷಣ ಔಪಚಾರಿಕ ವಿಧಿಯಾಗಿಬಿಟ್ಟಿದೆ, ೩ ದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ನಿರ್ಣಯಗಳ ವಿವರಗಳೂ ಬರುತ್ತವೆ, ನಂತರ ಎಲ್ಲವೂ ತಣ್ಣಗಾಗುತ್ತವೆ. ಕನಿಷ್ಠ ಚರ್ಚೆ ಕೂಡ ನಡೆಯುವದಿಲ್ಲ.
ನಿರ್ಣಯ ಎಂದರೆ ಕಾವೇರಿ ಚಳುವಳಿ, ಬೆಳಗಾವಿ ಕರ್ನಾಟಕದ್ದೇ, ಗೋಕಾಕ್ ಚಳುವಳಿ ಇತ್ಯಾದಿ.
ನಿರ್ಣಯಗಳು ಮೊದಲು ಜನಾಭಿಪ್ರಾಯವಾಗಿ ರೂಪುಗೊಳ್ಳಬೇಕು, ನಂತರ ಚರ್ಚೆಯಾಗಿ ಅದನ್ನು ಕಾರ್ಯಗತಗೊಳಿಸಬೇಕು. ಪ್ರತಿ ಸಮ್ಮೇಳನಾಧ್ಯಕ್ಷರನ್ನು ಒಂದು ವರ್ಷದ ಅವಧಿಯವರೆಗೆ ಸಾಕ್ಷಿ ಪ್ರಜೆಯಾಗಿ ನಿಯಮಿಸಬೇಕೆಂಬುದು ಪರಿಷತ್ತಿನ ಆಗ್ರಹ, ಆದರೆ ಯಾವ ರಾಜಕೀಯ ಪಕ್ಷಗಳೂ ಒಂದು ಖುರ್ಚಿಯನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಕಟುಸತ್ಯ. 
ಬೇರೆ ರಾಜ್ಯಗಳಿಂದ ಬಂದವರು ಕನ್ನದಲ್ಲಿ ಕಲಿತು ಬಳಸಬೇಕೆಂಬುದು ಈ ಬಾರಿಯ 10 ನಿರ್ಣಯಗಳಲ್ಲಿ ಒಂದಾಗಿತ್ತು. ಆದರೆ ಕನ್ನಡಿಗರೇ ಕನ್ನಡವನ್ನು ಬಳಸುವಲ್ಲಿ ಅನಾಸ್ಥೆ  ತೋರುವಾಗ, ಬೇರೆಯವರು ಹೇಗೆ ಕಲಿತಾರು?

'ಕನ್ನಡ ಪದ ಎಂಬುದು ಕಬ್ಬಿಣದ ಕಡಲೆಯಲ್ಲ, ಹಿರಿದಿದೆ ಕನ್ನಡದ ಅರ್ಥ' ಎಲ್ಲೋ ಓದಿದ ನೆನಪು. ಅರ್ಥ ತಿಳುದುಕೊಂಡವನೇ ಸಾರ್ಥಕ ಜೀವಿ, ಕನ್ನಡದ ಮುದ್ದಣರಿಂದ ಹಿಡಿದು ಈಗಿನ ಮುಂಗಾರು ಮಳೆಯ ತನಕ ಸಾಹಿತ್ಯ ಕೃಷಿಯಾಗಿದೆ, ಇನ್ನು ಮುಂದಿನ ಪೀಳಿಗೆಯ ಕನ್ನಡದ ಉಳಿವು-ಅಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ. ಮಾಯಾನಗರಿಗಳ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಅಕ್ಷರ ಜಾತ್ರೆಗೆ ಜನಗಳ ಸಾಥ್ ಸಿಕ್ಕಿರುವುದು, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹವಿದ್ದಂತೆ.
ತಮ್ಮ ಮನಸ್ಸಿಗೆ ತಟ್ಟಿದರೆ ಮರುತ್ತರ ಬರೆಯಿರಿ, ತಟ್ಟದಿದ್ದರೂ ಬರೆಯಿರಿ. 

ಜವಾಬ್ದಾರಿಯುತ ಕನ್ನಡಿಗ,
ಅರವಿಂದರಾಜ ಬಿ ದೇಸಾಯಿ. 

Sunday, February 20, 2011

ಮತದಾನ : ಎಸ್ ಎಲ್ ಭೈರಪ್ಪ

ಎಲ್ಲರಿಗೂ ನಮಸ್ಕಾರ, ತುಂಬಾ ದಿನವಾಯಿತು, ಏನಾದರು ಬರೆಯಲೇಬೇಕೆಂಬ ದೃಡ ನಿರ್ಧಾರದೊಂದಿಗೆ,  ಒಂದು ಕೈಯಲ್ಲಿ ಟೀ ಇನ್ನೊಂದು ಕೈಯಲ್ಲಿ ಪೆನ್ ಹಿಡಿದು ಕುಳಿತುಕೊಂಡಿದ್ದೇನೆ. ಯುದ್ಧದಲ್ಲಿ ಕತ್ತಿ, ಡಾಲ್ ಹಿಡಿದ ಯುವುದೋ ಯುವರಾಜ ನೆನಪಾಗುತ್ತಿದ್ದ. ಇರಲಿ, ಇನ್ನು ಕಾದಂಬರಿ ವಿಷಯಕ್ಕೆ ಬಂದರೆ,
ಸಮಕಾಲೀನ ಸಾರ್ವಜನಿಕ ಜೀವನವನ್ನು ವಸ್ತುವನ್ನಾಗಿರಿಸಿದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ಮತದಾನ ಕೃತಿಯ ವಿಮರ್ಶೆ ಇದು.


ಕೃತಿಯನ್ನು ಕೊಂಡದ್ದು ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಈ ಬಾರಿಯ ಸಾಹಿತ್ಯ  ಸಮ್ಮೇಳನದಲ್ಲಿ ೮ ಕೋಟಿ ರೂಪಾಯಿಗಳ ಕನ್ನಡ ಕೃತಿಗಳು ಬಿಕರಿಯಾದುದು ದಾಖಲೆ. ಅದರಲ್ಲಿ ನನ್ನದೊಂದು ಪಾಲಿದೆ ಎಂಬುದು ಹೆಮ್ಮೆಯ ವಿಚಾರ. ಕೆಲವು ಕೃತಿಗಳು ಮಾತ್ರ ೫೦% ರಿಯಾಯಿತಿಯಲ್ಲಿ ದೊರಕುತ್ತಿದ್ದುದು ಸಂತಸದ ವಿಷಯ, ಆದರೆ ಎಸ್ ಎಲ್ ಭೈರಪ್ಪ , ಕುವೆಂಪು, ತ.ರಾ.ಸು, ಮೊದಲಾದ ಖ್ಯಾತನಾಮರ ಕೃತಿಗಳ ಕೇವಲ ೧೦% ರಲ್ಲಿ ಮಾರಾಟವಾಗುತ್ತಿದ್ದವು. ೫೦% ರಲ್ಲಿ ಕೊಟ್ಟಿದ್ದರೆ ಚನ್ನಾಗಿತ್ತು ಎಂದೆನ್ನಿಸಿದರೂ ಕೂಡಾ, ಓದುವ ನನ್ನ ಚಟ ನನ್ನನ್ನು ಕಟ್ಟಿಹಾಕಿ, ಕಾದಂಬರಿ ಕೊಂಡುಕೊಳ್ಳಲು ಪ್ರೇರೇಪಿಸಿತು.


ಕೃತಿಯು ಹಳ್ಳಿಯ ಸೊಗಡು, ಜನರ ಹಿತವನ್ನು ಬಯಸುವ ಡಾ:ಶಿವಪ್ಪ, ಅಧಿಕಾರದ ಅಭಿಲಾಷೆಯ ಸಾದರವಳ್ಳಿ, ಕಾಂಗ್ರೆಸ್ಸಿನ ಮಂತ್ರಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡರ ಸುತ್ತ ಗಿರಕಿ ಹೊಡೆಯುತ್ತಾ, ಮತದಾನದ ಪ್ರಧಾನ ಅಂಶವಿರುವ ಕೃತಿಯಿದು.


ಜನರ ಹತ್ತಿರ ಹಣ ತೆಗೆದುಕೊಳ್ಳದೇ, ಔಷಧಿ ಕೊಟ್ಟು, ಜನಸೇವೆಯೇ ಜನಾರ್ಧನ ಸೇವೆ ಮಂತ್ರವೆಂದುಕೊಂಡಿದ್ದ ಡಾ:ಶಿವಪ್ಪನ ಜೀವನ ಯಾವ ಬಡವನ ಜೀವನಕ್ಕಿಂತ ಮಿಗಿಲಾದುದಲ್ಲ. ಅವನ ಈ ಹುಚ್ಚು ಜನಸೇವೆ ಅರಿಲಾರದ ತಾಯಿ, ಅಕ್ಕ ಮತ್ತು ಅವರ ಡಾಕ್ಟ್ರ ಬಗೆಗಿನ ಕಾಳಜಿ ಮತ್ತು ತಳಮಳಗಳು, ಕೃತಿಯ ಒಂದು ಗೋಡೆಯ ಆಧಾರ ಸ್ಥಂಬವಿದ್ದಂತೆ.


ಇಂಥ ಆದರ್ಶ ಜೀವಿಯನ್ನು ತನ್ನ ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಉಮೇದುವಾರರಲ್ಲಿ ಮೊದಲಿಗರು, ರಾಜಕೀಯ ಧುರೀಣ ಸಾದರವಳ್ಳಿ, ಕಿರು ಕಂಟ್ರಾಕ್ಟರ್ ರಾಮಲಿಂಗೇಗೌಡ. ಮದುವೆಯಾದರೆ ತನ್ನ ಆದರ್ಶ ಜೀವನಕ್ಕೆಲ್ಲಿ ಕೊಡಲಿ ಪೆಟ್ಟು ಬೀಳುವುದೆಂದು ಎಚ್ಚರ ವಹಿಸುವ ಡಾ:ಶಿವಪ್ಪ.


ಈ ಡಾ:ಶಿವಪ್ಪರ ಜನಸೇವೆಯು ಇಲ್ಲಿಗೆ ನಿಯಮಿತವಾಗಬಾರದು, ರಾಜ್ಯ ರಾಷ್ಟ್ರಕ್ಕೆ ತಮ್ಮಂಥ ತರುಣ ಆದರ್ಶ ಜೀವಿಗಳ ಅವಶ್ಯಕತೆಯಿದೆಯಂದೂ, ರಾಜಕೀಯದಲ್ಲಿದ್ದರೆ, ಇಂಥ ಸಾವಿರಾರು ಹಳ್ಳಿಗಳ ಉದ್ಧಾರವಾಗುವುದೆಂದು, ತಮ್ಮ ತಮ್ಮ ಹಿತವನ್ನು ಬಯಸಿ, ರಾಜಕೀಯ ಪಕ್ಷಗಳು ಡಾ:ಶಿವಪ್ಪನಿಗೆ ಮಂಕುಬೂದಿ ಎರಚಿ ಮತಧಾನಕ್ಕೆ ಸಿದ್ದ ಪಡಿಸುವುದು ಕೃತಿಯ ತಳಪಾಯ ಆಗಿದೆ, ಅಲ್ಲಿಂದ ಶುರು ಕಳ್ಳ ಪೋಲಿಸ್ ಆಟ.


ಮತದಾನದಲ್ಲಿ ಬಕರಾ ಆಗುವ ಡಾ:ಶಿವಪ್ಪ, ಅದೇ ಸಮಯದಲ್ಲಿ ಒಬ್ಬ ರೋಗಿಯ ಸಾವು, ತಾಯಿಯ ಸಾವು, ಕೆಟ್ಟ ಅನುಭವಗಳು ದೊಡ್ಡ ಪಾಠವನ್ನೇ ಕಲಿಸುತ್ತವೆ. ಕಿರು ಕಂಟ್ರಾಕ್ಟರ್ ಸಾಲ ಬಾಧೆ ತಾಳಲಾರದೆ ಖಿನ್ನತೆಯಿಂದ ಅತ್ಮಹತ್ಯೆ ಮಾಡಿಕೊಳ್ಳುವುದು, ಮದುವೆಯಾದ ಮಗಳು ರಂಗಲಕ್ಷ್ಮಿ ಮತ್ತು ಮದುವೆಯಾಗದ ಡಾ. ಶಿವಪ್ಪ ಅವರ ಜೀವನವು ನವ ವಸಂತವಾಗಿ ಬದಲಾಗುವುದರೊಂದಿಗೆ ಕೃತಿಯ ಉಪಸಂಹಾರ ಸುಖಾಂತ್ಯ ಕಾಣುತ್ತದೆ.


೧೯೬೫ ರಲ್ಲಿ ಪ್ರಕಟವಾದ ಈ ಕೃತಿ ಕರ್ನಾಟಕದ ಏಕೀಕರಣ ಮತ್ತು ಜಾತಿವಾದ ವಿಷಯವನ್ನು ಒಂದು ಭಾಗವನ್ನಾಗಿರಿಸಿದೆ.


ಸೂಳೇಮಕ್ಳು, ಹುಚ್ಚರಂಡಿ , ಮುಂಡೆ, ನಿಮ್ಮೌನ ಎಂಬ ಜವಾರಿ ಹಳ್ಳಿಯ ಬೈಗುಳ ಪದಗಳನ್ನು ಕೃತಿಯ ಒತ್ತಾಸೆಯಾಗಿ, ಹಳ್ಳಿಯ ಸೊಗಡನ್ನು, ನಿಜ ಸ್ವರೂಪವನ್ನು ಚಿತ್ರಿಸಲು, ಭಾಷೆಯ ಅಡ್ಜೆಕ್ಟಿವ್ ಆಗಿ ಬಳಸಿರುತ್ತಾರೆ.

"ಜನಸೇವೆಯು ಬರೀ ರಾಜಕಾರಣದಿಂದಲ್ಲ, ಆದರ್ಶವಿದ್ದರೆ ಅವಕಾಶ ಕಲ್ಪಿಸಿಕೊಂಡು ಮಾಡುವ ಕೆಲಸದಲ್ಲೇ ಜನಸೇವೆ ಮಾಡಿ ಕೈಲಾಸ ಕಾಣಬಹುದು ಎಂಬುದು ಕೃತಿಯ ಒಟ್ಟಾರೆ ಸಾರಾಂಶ".

ಕಾದಂಬರಿಯ ಕರ್ತೃ ಎಸ್ ಎಲ್ ಭೈರಪ್ಪ ಈ ಕೆಲ ದಿನಗಳ ಹಿಂದೆ ಕನ್ನಡಿಗರು "ತುಂಟರು" ಎಂದು ಹೇಳಿ ವಿವಾದದಲ್ಲಿ ಸಿಕ್ಕಿಕೊಂಡಿರುವುದು ನೆನಪಿಗೆ ಬರುತ್ತದೆ. ಅದರ ಹಿನ್ನೆಲೆ ಏನೇ ಇರಲಿ, ಅವರ ಮಾತಿಗೆ ನನ್ನ ಧಿಕ್ಕಾರವಿದ್ದೇ ಇದೆ. ಅವರ ಮೇಲಿನ ಗೌರವ ಕೊಂಚ ಕಡಿಮೆಯಾದರೂ ಕೂಡಾ, ಅವರ ಈ ಕೃತಿಗಳು, ಅವರು ಮಾಡುತ್ತಿರುವ ಕನ್ನಡಾಂಬೆಯ ಸೇವೆಯ ಮುಂದೆ ನಮ್ಮ ಧಿಕ್ಕಾರ ಯಾವ ಲೆಕ್ಕಕ್ಕೂ ಇಲ್ಲ. 
77 ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಲೇಖನ ಕೂಡಾ ಬರೆದಾಗಿದೆ. ಚಿಕ್ಕ, ಪುಟ್ಟ, ಸಂಕಲನ, ವ್ಯವಕಲನಗಳಿವೆ, 2 ದಿನ ಹಿಡಿಯಬಹುದು.

ಎಂದೆಂದೂ ನಿಮ್ಮವ
ಅರವಿಂದರಾಜ ಬಿ ದೇಸಾಯಿ....,








Monday, November 1, 2010

ಹಿಮಾಲಯನ್ ಬ್ಲಂಡರ್ : ರಾಜಕೀಯ v/s ಸೈನ್ಯ


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು. ಪತ್ರಿಕೋದ್ಯಮದಲ್ಲಿ ಹೊಸ ಗಾಳಿಯನ್ನು ಬೀಸಿದಂಥ ರವಿ ಬೆಳೆಗೆರೆಯವರ "ಹಿಮಾಲಯನ್ ಬ್ಲಂಡರ್" ಕೃತಿಯನ್ನು ಓದಲು ಪ್ರೇರೇಪಿಸಿದವರು ಬಹಳ ಆದರೆ ಕೃತಿಯನ್ನು ಓದಲು ಕೊಟ್ಟು ಪ್ರಾಮಾಣಿಕ ಪ್ರಯತ್ನ ಮಾಡಿದವರಲ್ಲಿ ನನ್ನ ಆತ್ಮೀಯ ಸ್ನೇಹಿತ ಶ್ರೀನಿಧಿ ಮೊದಲಿಗ. ಈ ಕೃತಿಯ ಕುರಿತು ನನ್ನ ಅನಿಸಿಕೆ ಮತ್ತು ಸಂತೋಷ ವ್ಯಕ್ತಪಡಿಸಲು ಈ ಲೇಖನ.
ಇದು ಜಾನ್ ಪಿ ದಳವಿಯವರ ಮೂಲ ಕೃತಿಯಾಗಿದ್ದು, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಶ್ರೀ ರವಿ ಬೆಳೆಗೆರೆಯವರು.
ಯಾವುದೇ ಕೃತಿ ಯನ್ನು ತರ್ಜುಮೆ ಮಾಡುವಾಗ ಅಲ್ಲಿನ ನೆಲೆಗೆಟ್ಟು ಮತ್ತು ಪ್ರಾಂತ್ಯದ ಜನರ ಅಭಿರುಚಿಗೆ ತಕ್ಕಂತೆ ಮನಮುಟ್ಟುವಂತೆ ಹೇಳುವುದಾಗಲೀ ಬರೆಯುವುದಾಗಲೀ ಒಂದು ಕಲೆಯೆಂದೂ ಭಾವಿಸಿರುತ್ತೇನೆ. ಆ ಕಲೆಯು ಮತ್ತು ಕನ್ನಡಿಗರ ನಾಡಿ ಮಿಡಿತದ ಹಿಡಿತ ಕವಿಗೆ ಚೆನ್ನಾಗಿ ಗೊತ್ತಿದೆ ಎಂದೆನಿಸದೇ ಇರಲಾರದು.

ಕೃತಿಯ ಮುಂಚೆ ಕವಿಯ ಬಗ್ಗೆ ಹೇಳುವುದಾದರೆ, ನನ್ನ ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಎಲ್ಲ ಕವಿಗಳ ಸೂಚ್ಯ ಪರಿಚಯ ನೀಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. 10ನೇ ವಯಸ್ಸಿನಿಂದ ರವಿ ಬೆಳೆಗೆರೆಯವರ ಹೆಸರನ್ನು ಕೇಳುತ್ತಾ ಬಂದಿದ್ದರೂ ಕೂಡಾ, ಅವರ ಕೃತಿ ಓದಲು ಮತ್ತೂ 10 ವರ್ಷಗಳು ಬೇಕಾಯಿತು. ಅವರ "ಹಂತಕಿ ಐ ಲವ್ ಯೂ" ನಾನು ಓದಿದ ಮೊದಲ ಕೃತಿ ನಂತರ "ಮಾಂಡೋವಿ", "ಖಾಸ್ ಬಾತ್", "ಗಾಂಧಿ ಹತ್ಯೆ ಮತ್ತು ಗೋಡ್ಸೆ", "ಓ ಮನಸೇ", "ಹಾಯ್ ಬೆಂಗಳೂರು". ಈಗ "ಹಿಮಾಲಯನ್ ಬ್ಲಂಡರ್".

ಓದುತ್ತಾ ಓದುತ್ತಾ ಹೋದಂತೆಲ್ಲಾ ಭಾರತದ ಸೈನ್ಯದ ಬಗ್ಗೆ ಏನು ತಿಳುವಳಿಕೆ ಇಲ್ಲದ ವ್ಯಕ್ತಿಗೂ ಸಾಮಾನ್ಯ ತಿಳುವಳಿಕೆ ಬರದೇ ಇರದು. ಒಂದು ಬ್ರಿಗೇಡ್, ಒಬ್ಬ ಬ್ರಿಗೇಡಿಯರ್, ಒಂದು ಸೈನ್ಯ, ಒಬ್ಬ ಜನರಲ್, ಕ್ಯಾಪ್ಟನ್, ಲೆಫ್ಟಿನೆಂಟ್, ಕರ್ನಲ್, ಮೇಜರ್ ಮುಂತಾದ ಸೈನ್ಯದ ವಿಭಾಗಗಳು ಮತ್ತೂ ವಿಭಾಗಾಧಿಕಾರಿಗಳ ಚಿತ್ರಣ, ಅವರ ಕಾರ್ಯಗಳು, ಮನಸ್ಸಿನ ತಳಮಳಗಳು ಏನು? ಎಂಬುದರ ಪೂರ್ಣ ಪ್ರಮಾಣದ ಜ್ಞಾನ ಕೃತಿಯ ಜೀವಾಳವಾಗಿದೆ. ೧೯೭೦ರ ದಶಕದಲ್ಲಿ ಭಾರತೀಯ ರಾಜಕಾರಣಿಗಳು ಮತ್ತೂ ಸೈನ್ಯದ ಹಿರಿಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಭಾರತೀಯ ಸೈನ್ಯದ ಮತ್ತೂ ಸೈನಿಕರ ಬಗ್ಗೆ ಕಾಳಜಿ ವಹಿಸಿದ್ದರೆಂಬುದು ಮತ್ತೂ ಆ ಮಿಲಿಟರಿ ಇತಿಹಾಸದಿಂದ ಪ್ರಸ್ತುತ ಪೀಳಿಗೆ ಏನನ್ನು ಕಲಿಯಬೇಕೆಂಬುದನ್ನು ಸ್ಪಷ್ಟಪಡಿಸಲಾಗಿದೆ.
ಆಗಷ್ಟೇ ಸ್ವಾತಂತ್ರ್ಯ ಹೊಂದಿದ್ದ ಭಾರತ ದೇಶದ ಚುಕ್ಕಾಣಿ ಹಿಡಿದ ಭಾರತದ ಕುವರರು ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಅನುಭವ ಇತ್ತೇ ಹೊರತು, ಮಿಲಿಟರಿ ಯುದ್ದ ತಾಂತ್ರಿಕತೆ ಮತ್ತು ಮಿತ್ರು ರಾಷ್ಟ್ರಗಳ ಕೋಮು ಮನಸ್ತಿತಿಯನ್ನುಅರ್ಥಮಾಡಿಕೊಳ್ಳಲು ವಿಫಲವಾದುದೇ ಈ ದುರಂತಕ್ಕೆ ಕಾರಣವಿರಬಹುದೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಕೂಡಾ, ನಾಲ್ಕು ಗೋಡೆಗಳ ಮಧ್ಯೆ ನಡೆದ ವಿಚಾರಗಳೇನು? ಸತ್ಯ ಸಂಗತಿಯೇನು? ಯಾರ ಪ್ರತಿಷ್ಠೆಯ ಕುತಂತ್ರವಿರಬಹುದೆಂದು ಬಹುಶ: ಬ್ರಿಗೇಡಿಯರ್ ಜಾನ್ ಪಿ ದಳವಿಯವರ ಮಿಲಿಟರಿ ಇತಿಹಾಸದ ಮಹತ್ತರ ಕೃತಿ ಎನಿಸಿಕೊಂಡಿರುವ "ಹಿಮಾಲಯನ್ ಬ್ಲಂಡರ್"ನಲ್ಲಿ ತಿಳಿಯಬಹುದಾಗಿದೆ.
ಕತೃ ರವಿ ಬೆಳೆಗೆರೆಯವರು ಈ ಕೃತಿಯ ಮುನ್ನುಡಿಯಲ್ಲಿ ಈ ಕೃತಿ ಓದಿ ಒಂದು ಹನಿ ಕಣ್ಣೀರು ಸುರಿಸಿದರೆ ಈ ಕೃತಿ ಬರೆದುದಕ್ಕೆ ಸಾರ್ಥಕ ಎಂದು ಬರೆದಿದ್ದಾರೆ. ಅಂತೆಯೇ ನಾನೂ ಕೂಡಾ ಭಹಲ ಸಲ ಈ ಕೃತಿ ಓದುವಾಗ ಕಣ್ಣೀರು ಸುರಿಸಿದ್ದೇನೆ. ನಾನೂ ಎಷ್ಟು ಸಲ ಕಣ್ಣೀರು ಸುರಿಸಿದೆ ಎಂಬುದು ಬಹುಶಃ ಲೆಕ್ಕವಿದಬಹುದೇ ವಿನಃ ಎಷ್ಟು ಕಣ್ಣೆರ ಹನಿ ಸುರಿಸಿದೆ ಎಂಬುದು ಲೆಕ್ಕವಿಡಲಾಗಲಿಲ್ಲ. ವಿಶೇಷವಾಗಿ ಪಂಜಾಬಿ ಸೈನಿಕರು ರೊಟ್ಟಿಯ ಹಂಚನ್ನು ಏಕೆ ತರಲಿಲ್ಲವೆಂದು ಬ್ರಿಗೇಡಿಯರ್ ಕೇಳಿದಾಗ, ಪ್ಲಟೂನ್ ಸೈನಿಕು ಕೊಡುವ ಉತ್ತರ. ಕನ್ನಡಕ ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುವ ನಿರ್ಭಾಗ್ಯ ಸೈನಿಕ . ಬೂಟುಗಳಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದಿದ್ರೂ, ಕಾಡತೂಸು ಇರುವ ತನಕ ಬಡಿದಾಡಿದ ಹುತಾತ್ಮ ಸೈನಿಕರನ್ನು ನೆನಸಿಕೊಂಡಾಗಲಂತೂ ಕಣ್ಣೀರ ಕಟ್ಟೆಯನ್ನು ನನ್ನಿಂದ ತಡೆಹಿಡಿಯಲು ಸಾಧ್ಯವಾಗಲೇ ಇಲ್ಲ.
ಒಂದು ಕಡೆ ಪರ್ವತ ಹತ್ತುವಾಗ 40 ಸೈನಿಕರಿದ್ದ ತುಕಡಿ, ಸಂಖ್ಯೆ 11ಕ್ಕೆ ಇಳಿದಾಗ ಬಿದ್ದ ದುಖಃದ ಕಣ್ಣೀರು, ಕ್ರೋಧದ ಕಣ್ಣೀರು, ಕನಿಕರದ ಕಣೀರು, ಅಯ್ಯೋ ಪಾಪ ಕಣ್ಣೀರು, ನಮ್ಮ ಮನೆಯಲ್ಲೇ ಒಬ್ಬನನ್ನು ಕಳೆದುಕೊಂಡ ಮನಸ್ತಿತಿಯ ಕಣ್ಣೀರಿಗೆ ಲೆಕ್ಕವಿಲ್ಲ. ಯಾರ ಕುತಂತ್ರ ಏನೆ ಇದ್ದರೂ ಗಡಿ ಕಾಯುವ ಕೆಲಸ ತಪ್ಪದೇ ಮಾಡುವ ಸೈನಿಕರ ನೆನದು ಕನ್ನಲಿಗೆಗಳು ಮುಂದಿನ ಸಾಲು ಓದಲಿಕ್ಕಾಗದಷ್ಟು ತುಂಬುತ್ತಿದ್ದವು.
ಕೃತಿ ಬಿಡುಗಡೆಯಾದ ಮೇಲೆ ಜನರ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳ ಅರಿವು ಲೇಖಕನಿಗೆ ಇದ್ದೆ ಇರುತ್ತದೆ. ಈ ಕೃತಿಯ ಪರಿಣಾಮ 'ಜಾಗೃತಿ'. ಇನ್ನು ಮುಂದಾದರೂ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವು ಮತ್ತು ತಿಳುವಳಿಕೆ ರಾಜಕಾರಣಿಗಳಿಗಾಗಲೀ, ಸೈನ್ಯದ ಅಧಿಕಾರಿಗಳಿಗಾಗಲೀ ಮೂಡುತ್ತದೆ. ನನ್ನಂಥ ಎಷ್ಟೋ ವಿದ್ಯಾರ್ಥಿಗಳ ಜಾಗೃತಿಗೆ ಕವಿ ಕಾರಣರಾಗಿದ್ದಾರೆ.
ಈ ಕೃತಿಯನ್ನು ನಾವು ಓದಿದ್ದಕ್ಕಿಂತ ಮಿಲಿಟರಿಯಲ್ಲಿರುವವರು ಓದಿದರೆ ಹೆಚ್ಚು ಧನ್ಯರಾಗುತ್ತಾರೆ ಮತ್ತು ಪರಿಸ್ತಿತಿಯನ್ನು ಕೊಂಚ ಮಟ್ಟಿಗೆ ಸುಧಾರಣೆ ಮಾಡುತ್ತಾರೆಂದು ನಂಬಿ ಈ ಕೃತಿಯನ್ನು ಕನ್ನಡಾಭಿಮಾನಿಯಾದ ನನ್ನ ಅಣ್ಣ
ಜೆ ಸಿ ಸಂಗಮೇಶ ಮೊಳೆ,ತಿಮ್ಮಯ್ಯ ಬೆಟಾಲಿಯನ್, ಐ ಎಂ ಎ, ಡೆಹರಾಡೂನ್.
ಎಂಬಲ್ಲಿಗೆ ಕಳಿಸಿ ನನ್ನ ಜವಾಬ್ದಾರಿಯನ್ನು ಗುಲಗಂಜಿಯಷ್ಟು ಕಡಿಮೆ ಮಾಡಿಕೊಂಡಿದ್ದೇನೆ.
ಈ ಕೃತಿಯ ಜೀವಾಳ ಮತ್ತು ಹಿರೋಗಳಾದಂಥ ನಮ್ಮ ಭಾರತೀಯ ಸೇನೆಯ ಸೈನಿಕರಿಗೆ ಹೃದಯಾಂತರಾಳದಿಂದ ಸಾವಿರ ಸಾವಿರ ವಂದನೆಗಳನ್ನು ಸಮರ್ಪಿಸುತ್ತ, ಮತ್ತು ಎಂಥ ಜಾಗೃತಿ ಹಿನ್ನೆಲೆಯಿರುವ ಕೃತಿಯನ್ನು ಹೊರ ತಂದಂಥ ಬೆಳೆಗೆರೆಯವರಿಗೂ ನನ್ನದೊಂದು ಸೆಲ್ಯೂಟ್ ಹೇಳುತ್ತಾ, "ಹಿಮಾಲಯನ್ ಬ್ಲಂಡರ್" ಮೂಲ ಕೃತಿಯ ಕತೃ ಮತ್ತು 1962 ರ ಚೀನಾ ವಿರುಧ್ಧ ಯುದ್ಧದ ಪ್ರತ್ಯಕ್ಷದರ್ಶಿಯಾಗಿದ್ದಂಥ ಮಹಾನ್ ಹೋರಾಟಗಾರ ಬ್ರಿಗೇಡಿಯರ್ ಜಾನ್ ಪಿ ದಳವಿಯವರಿಗೂ ಕೂಡಾ ನನ್ನ ಸಾವಿರ ನಮನಗಳನ್ನು ಅರ್ಪಿಸುತ್ತಿದ್ದೇನೆ. 
ಶಿಕ್ಷಕನನ್ನು ಹೊರತುಪಡಿಸಿದರೆ ಬಹುಶಃ ಎಂಥ ಗುರುತರ ಜವಾಬ್ದಾರಿ ಇರುವುದು ಲೇಖಕನ ಲೇಖನಿಗೆ ಮಾತ್ರ ಇದೆ. ಇಂಥ ಜವಾಬ್ದಾರಿಯನ್ನು ಬೆಳೆಗೆರೆಯವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದನ್ನು ಈ ಕರುನಾಡು ಬೆಳೆಗೆರೆಯವರಿಂದ ಯಾವತ್ತೂ ಅಪೇಕ್ಷಿಸುತ್ತಲೇ ಇರುತ್ತದೆ.
ನನ್ನ ಈ ಲೇಖನವನ್ನು ನನ್ನ ಮಿತಿಯ ಪದಗಳಲ್ಲಿ ಅವಲೋಕಿಸಿ, ಕೃತಿಯ ಸಾರ್ಥಕತೆಯನ್ನು ಕೊಂಚ ಜಾಸ್ತಿ ಮಾಡುವ ಪುಟ್ಟ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.



ಎಂದೆಂದೂ ನಿಮ್ಮವ,
ಅರವಿಂದರಾಜ ಬಿ ದೇಸಾಯಿ.